ಪ್ರಭಾವಿಗಳ ಹಿತ ಕಾಪಾಡಲು ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಪಾಲಿಕೆಯ ದಬ್ಬಾಳಿಕೆ ಖಂಡನೀಯ – ಸಿಪಿಐಎಂ

ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಡ ಬೀದಿಬದಿ ವ್ಯಾಪಾರಸ್ಥರ ಮೇಲೆ ನಗರಾಡಳಿತ ನಡೆಸುತ್ತಿರುವ ದಾಳಿಗಳು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆಡಳಿತವನ್ನೇ ನಾಚಿಸುವಂತಿದೆ. ನಗರದಲ್ಲಿ ಸಂಡೇ ಬಜಾರ್ ವ್ಯಾಪಾರಸ್ಥರ ವಿರುದ್ದ ಪ್ರಾರಂಭವಾದ ದಬ್ಬಾಳಿಕೆಗಳು ನಗರದ ಎಲ್ಲಾ ಭಾಗಗಳಲ್ಲಿಯೂ ವಿಸ್ತರಿಸಿದೆ. ಇದು ತನ್ನ ಬಡಜನ ವಿರೋದಿ ಮನೋಭಾವವನ್ನು ತೋರಿಸುತ್ತದೆ ಎಂದು CPIM ನಗರ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ತಾ. 20/06/2026 ರ ಶನಿವಾರ ಪಡೀಲ್–ಬಜಾಲ್ ಮುಖ್ಯ ರಸ್ತೆಯಲ್ಲಿ ಜೀವನೋಪಾಯಕ್ಕಾಗಿ ಹಲವು ವರ್ಷಗಳಿಂದ ಹೂವಿನ ವ್ಯಾಪಾರ ನಡೆಸುತ್ತಿದ್ದ ಅಂಗವಿಕಲ ಬೀದಿಬದಿ ವ್ಯಾಪಾರಿಗಳಾದ ಚಂದ್ರಹಾಸ ಪೂಜಾರಿ ಮತ್ತು ಸುನೀತಾ ಪೂಜಾರಿ ಅವರ ವ್ಯಾಪಾರ ಕೇಂದ್ರಗಳನ್ನು ಜೆಸಿಬಿ ಬಳಸಿ ಧ್ವಂಸಗೊಳಿಸಿರುವ ಮಂಗಳೂರು ಮಹಾನಗರ ಪಾಲಿಕೆಯ ಅಮಾನವೀಯ ಕ್ರಮವನ್ನು ಸಿಪಿಐಎಂ ಮಂಗಳೂರು ನಗರ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ತಮ್ಮ ಶ್ರಮವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಬಡ ಕಾರ್ಮಿಕ ವರ್ಗದ ಮೇಲೆ ಅಧಿಕಾರ ಯಂತ್ರವನ್ನು ಬಳಸಿಕೊಂಡು ದಾಳಿ ನಡೆಸಿರುವುದು ಕೇವಲ ಆಡಳಿತಾತ್ಮಕ ಕ್ರಮವಲ್ಲ; ಇದು ಬಂಡವಾಳಶಾಹಿ ವ್ಯವಸ್ಥೆಯ ವರ್ಗಪಕ್ಷಪಾತದ ಮುಖವನ್ನು ಮತ್ತೊಮ್ಮೆ ಬಯಲಿಗೆಳೆದಿರುವ ಘಟನೆಯಾಗಿದೆ. ದೊಡ್ಡ ವ್ಯಾಪಾರ ಮಳಿಗೆಗಳು, ಪ್ರಭಾವಿ ಮಾಲಕರು ಮತ್ತು ಹಣದ ಶಕ್ತಿಯ ಮುಂದೆ ತಲೆಬಾಗುವ ಆಡಳಿತವು ಬದುಕಿಗಾಗಿ ಹೋರಾಡುತ್ತಿರುವ ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಮಾತ್ರ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದೆ.

, ರಾಜ್ಯದ ಆಡಳಿತ ಯಂತ್ರವು ಹೆಚ್ಚಾಗಿ ಆಳುವ ವರ್ಗದ ಹಿತಾಸಕ್ತಿಯನ್ನು ಕಾಪಾಡುವ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದಕ್ಕೆ ಈ ಘಟನೆ ಜೀವಂತ ಉದಾಹರಣೆಯಾಗಿದೆ. ನಗರದ ರಸ್ತೆ, ಸಾರ್ವಜನಿಕ ಸ್ಥಳಗಳು ಮತ್ತು ಸಂಪನ್ಮೂಲಗಳೆಲ್ಲವೂ ಎಲ್ಲಾ ನಾಗರಿಕರಿಗೂ ಸೇರಿದ್ದಾಗಿದೆ, ದುಡಿಯುವ ಜನರಿಗೆ ಅದರ ಮೇಲೆ ಸಂಪೂರ್ಣ ಹಕ್ಕು ಇದೆ. ಆದರೆ ಇಂದು ನಗರಾಭಿವೃದ್ಧಿ ಎಂಬ ಹೆಸರಿನಲ್ಲಿ ಬಡವರನ್ನು ನಗರದಿಂದಲೇ ಹೊರದಬ್ಬುವ ನೀತಿಗಳನ್ನು ಅನುಸರಿಸಲಾಗುತ್ತಿದೆ.
ಶೇಕಡಾ 75 ರಷ್ಟು ಅಂಗವೈಕಲ್ಯ ಹೊಂದಿರುವ ಬೀದಿ ಬದಿ ವ್ಯಾಪಾರಿಗಳನ್ನು ಬಿಡದೆ ಅವರ ಬದುಕಿನ ಮೇಲೆ ಪಾಲಿಕೆ ಬುಲ್ಡೋಜರ್ ಹರಿಸಿರುವುದು ಅಮಾನವೀಯ ಕೃತ್ಯವಾಗಿದೆ. ಇವರ ಅಂಗಡಿ ಸಾಮಗ್ರಿಗಳನ್ನು ಧ್ವಂಸಗೊಳಿಸಿ, ವಶಪಡಿಸಿ ಕೊಂಡಿರುವ ಕ್ರಮವು ಸಂವಿಧಾನಬದ್ಧ ಜೀವನೋಪಾಯದ ಹಕ್ಕಿನ ಮೇಲಿನ ನೇರ ದಾಳಿಯಾಗಿದೆ.
ಬಡವರ ಗುಡಿಸಲುಗಳು, ಸಣ್ಣ ವ್ಯಾಪಾರ ಕೇಂದ್ರಗಳು ಮತ್ತು ಬೀದಿಬದಿ ವ್ಯಾಪಾರಗಳು ಮಾತ್ರ ಅಧಿಕಾರಿಗಳಿಗೆ ಕಾಣುತ್ತವೆ. ಆದರೆ ಸಾರ್ವಜನಿಕ ಜಾಗಗಳನ್ನು ಅತಿಕ್ರಮಿಸುವ ಪ್ರಭಾವಿಗಳ ವಿರುದ್ಧ ಇದೇ ರೀತಿಯ ಕ್ರಮ ಕೈಗೊಳ್ಳಲು ಆಡಳಿತ ಹಿಂದೇಟು ಹಾಕುವುದು ಏಕೆ? ಈ ದ್ವಂದ್ವ ನೀತಿಯೇ ಆಡಳಿತ ಯಾರ ಪರವಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಆದ್ದರಿಂದ ಚಂದ್ರಹಾಸ ಪೂಜಾರಿ ಮತ್ತು ಸುನೀತಾ ಪೂಜಾರಿ ಅವರಿಗೆ ಕೂಡಲೇ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು,
ಧ್ವಂಸಗೊಳಿಸಿದ ವಸ್ತುಗಳಿಗೆ ಸಂಪೂರ್ಣ ಪರಿಹಾರ ನೀಡಬೇಕು.
ಬೀದಿಬದಿ ವ್ಯಾಪಾರಿಗಳ ವಿರುದ್ಧದ ದಬ್ಬಾಳಿಕೆ ಕ್ರಮಗಳನ್ನು ತಕ್ಷಣ ನಿಲ್ಲಿಸಬೇಕು. ಬೀದಿಬದಿ ವ್ಯಾಪಾರಿಗಳ ಹಕ್ಕುಗಳನ್ನು ರಕ್ಷಿಸುವ ಕೇಂದ್ರ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ಈ ಅಮಾನವೀಯ ಕ್ರಮಕ್ಕೆ ಹೊಣೆಗಾರರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಂದು ನಗರ ಪಾಲಿಕೆ ಅಧಿಕಾರಿಗಳನ್ನು CPIMಒತ್ತಾಯಿಸಿದೆ. ದುಡಿಯುವ ಜನರ ಬದುಕಿನ ಮೇಲೆ ನಡೆಯುವ ಇಂತಹ ವರ್ಗದಾಳಿಗಳನ್ನು ಸಿಪಿಐಎಂ ಪಕ್ಷ ಎಂದಿಗೂ ಸಹಿಸುವುದಿಲ್ಲ. ಬಡವರ ಬದುಕನ್ನು ಬುಲ್ಡೋಜರ್‌ನಿಂದ ನಾಶಮಾಡುವ ಆಡಳಿತದ ವಿರುದ್ಧ ಜನಾಂದೋಲನವನ್ನು ಕಟ್ಟಲು ಮತ್ತು ಸಂತ್ರಸ್ತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲು ಸಿಪಿಐಎಂ ಬದ್ಧವಾಗಿದೆ .

SHARE
Loading spinner

Leave a Reply

Your email address will not be published. Required fields are marked *

error: Content is protected !!