ಮಂಗಳೂರು, ಜೂ.25: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ವಿಮರ್ಶಾತ್ಮಕ ಚಿಂತನೆ ಹಾಗೂ ನಾಗರಿಕ ಜಾಗೃತಿ ಬೆಳೆಸುವ ಉದ್ದೇಶದಿಂದ ಯಂಗ್ ಇಂಡಿಯನ್ಸ್ (ವೈಐ) ಮಂಗಳೂರು ಘಟಕವು ‘ಯಂಗ್ ಇಂಡಿಯನ್ಸ್ ಪಾರ್ಲಿಮೆಂಟ್-2026’ ಕಾರ್ಯಕ್ರಮವನ್ನು ಜುಲೈ 3 ಮತ್ತು 4ರಂದು ಬೋಂದೆಲ್ನ ಭಾರತ್ ಅಕಾಡೆಮಿಯಲ್ಲಿ ಆಯೋಜಿಸಿದೆ ಎಂದು ಘಟಕದ ಅಧ್ಯಕ್ಷ ಶರಣ್ ಶೆಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 3ರಂದು ಬೆಳಿಗ್ಗೆ 9 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ದಕ್ಷಿಣ ಕನ್ನಡ ಲೋಕಸಭಾ ಸದಸ್ಯ Capt. Brijesh Chowta ಹಾಗೂ ಶಾಸಕ Vedavyas Kamath ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
9ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ರೂಪಿಸಲಾದ ಈ ಕಾರ್ಯಕ್ರಮವು ನೈಜ ಸಂಸತ್ತಿನ ಕಾರ್ಯವೈಖರಿಯನ್ನು ಪ್ರತಿಬಿಂಬಿಸುವ ಮಾದರಿ ಅಧಿವೇಶನಗಳು ಮತ್ತು ಚರ್ಚೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಭಾಷಣ, ನಾಯಕತ್ವ, ಸಂವಹನ, ಚರ್ಚಾ ಕೌಶಲ್ಯ ಹಾಗೂ ನೀತಿ ನಿರೂಪಣೆಯ ಅರಿವು ಬೆಳೆಸುವ ಗುರಿಯನ್ನು ಹೊಂದಿದೆ.
ಜಿಲ್ಲೆಯ ವಿವಿಧ ಶಾಲೆಗಳಿಂದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಕಾರ್ಯಕ್ರಮಕ್ಕೆ ವಿವಿಧ ಸಂಸ್ಥೆಗಳು ಪ್ರಾಯೋಜಕತ್ವ ನೀಡಿವೆ. ಸುದ್ದಿಗೋಷ್ಠಿಯಲ್ಲಿ ಆದಿತ್ಯ ಶೆಟ್ಟಿ, ಆಶಿಷ್ ರೈ ಹಾಗೂ ಕೇದಾರನಾಥ ಶೆಣೈ ಉಪಸ್ಥಿತರಿದ್ದರು.