ಕೆಕೆಪಿಎಲ್‌ಗೆ ಸಜ್ಜಾದ ಮಂಗಳೂರು ತಂಡ; ಹೆಸರು-ಲೋಗೋ ಬಿಡುಗಡೆ

ಮಂಗಳೂರು, ಜೂನ್ 27: ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (ಕೆಕೆಪಿಎಲ್) ಪಂದ್ಯಾವಳಿಯಲ್ಲಿ ಭಾಗವಹಿಸಲಿರುವ ದಕ್ಷಿಣ ಕನ್ನಡ ಜಿಲ್ಲೆಯ ‘ಮಂಗಳೂರು’ ತಂಡದ ಅಧಿಕೃತ ಹೆಸರು ಹಾಗೂ ಲೋಗೋವನ್ನು ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರು ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, ಕರಾವಳಿ ಭಾಗದ ಕಬಡ್ಡಿ ಪ್ರತಿಭೆಗಳಿಗೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಅವಕಾಶ ಮತ್ತು ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಂಗಳೂರು ತಂಡವನ್ನು ಖರೀದಿಸಲಾಗಿದೆ ಎಂದು ತಿಳಿಸಿದರು. ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ಮತ್ತಷ್ಟು ಉತ್ತೇಜಿಸುವ ಸಂಕಲ್ಪದೊಂದಿಗೆ ತಂಡವನ್ನು ಮುನ್ನಡೆಸಲಾಗುತ್ತಿದ್ದು, ಕರಾವಳಿಯ ಪ್ರತಿಭಾವಂತ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಈ ವೇದಿಕೆ ನೆರವಾಗಲಿದೆ ಎಂದು ಹೇಳಿದರು.

ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ನಲ್ಲಿ ಮಂಗಳೂರು ತಂಡವು ಕರಾವಳಿಯ ಕ್ರೀಡಾ ಸಾಮರ್ಥ್ಯವನ್ನು ಪ್ರತಿನಿಧಿಸಲಿದ್ದು, ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಬಲಿಷ್ಠ ತಂಡವನ್ನು ಕಟ್ಟುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ತಂಡದ ಮುಖ್ಯ ಕೋಚ್ ಹಬೀಬ್ ಮಾಣಿ ಅವರ ನೇತೃತ್ವದಲ್ಲಿ, ಪೋಷಕರು ಹಾಗೂ ಬ್ರಾಂಡ್ ಅಂಬಾಸಿಡರ್‌ಗಳಾದ ಬೋಜ್ ರಾಜ್ ವಾಮಂಜೂರು ಮತ್ತು ದೇವದಾಸ್ ಕಾಪಿಕಾಡ್ ಅವರ ಸಹಕಾರದೊಂದಿಗೆ ತಂಡ ಕಣಕ್ಕಿಳಿಯಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುದೇಶ್ ಭಂಡಾರಿ, ಇಮ್ತಿಯಾಜ್, ನಿಶಾನ್, ಹಬೀಬ್ ಮಾಣಿ, ದಿವಿಶ್ ಹಾಗೂ ಪುರುಷೋತ್ತಮ ಭಂಡಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!