ಕಾಸರಗೋಡು – ಹರಿದಾಸ ಸಾಹಿತ್ಯ ಕರ್ನಾಟಕದಲ್ಲಿ ಶ್ರೀ ಮಧ್ವಾಚಾರ್ಯರ ದ್ವೈತ ಸಿದ್ಧಾಂತ ಮತ್ತು ಭಕ್ತಿ ಮಾರ್ಗವನ್ನು ಸಮಾಜಕ್ಕೆ ತಲುಪಿಸಲು ಮಾಡಿದ ಒಂದು ವಿಶಿಷ್ಟ ಸಾಹಿತ್ಯ. ಇದು ಕೀರ್ತನೆ, ಭಜನೆ,ಪದೇ ಸುಳಾದಿ ಹಾಗೂ ಉಗಾಭೋಗಗಳ ಮೂಲಕ ಜ್ಞಾನ, ನೈತಿಕತೆ ಮತ್ತು ಭಕ್ತಿಯನ್ನು ಜನರಲ್ಲಿ ಮೂಡಿಸುವ ಸಾಹಿತ್ಯ ಎಂದು ಸಂಘದ ಕೋಶಾಧಿಕಾರಿ ಡಾ. ವೆಂಕಟಗಿರೀಶ್ ಬಣ್ಣಿಸಿದರು.

ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ) ಕಾಸರಗೋಡು ಇವರ 238 ನೇ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ಶ್ರೀ ಗಿರಿ ಸದನದ ಶಿವದುರ್ಗಾ ವೇದಿಕೆಯಲ್ಲಿ ಹರಿದಾಸ ಸಾಹಿತ್ಯ ಎಂಬ ಕಾರ್ಯಕ್ರಮ ಆಯೋಜಿಸಲಾಯಿತು. ಸಂಘದ ಅಧ್ಯಕ್ಷರಾದ ಡಾ. ವಾಣಿಶ್ರೀ ಕಾಸರಗೋಡು ಹರಿದಾಸರಾದ ಶ್ರೀಪಾದ ರಾಯರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಂಡರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಶ್ ಉಡುಪಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸೂಕ್ತ ಮಾರ್ಗದರ್ಶನ ನೀಡಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ಅಚ್ಚುತ ಭಟ್ ಕೀರ್ತನೆಗಳನ್ನು ಹಾಡಿ ರಂಜಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ ವಾಣಿಶ್ರೀ ಕಾಸರಗೋಡು ಹಾಗೂ ಕಲಾವಿದರಾದ ಕಾರ್ತಿಕ ಆದೀಶ್ ಅರವಿಂದ್ ಮುಂತಾದ ಕಲಾವಿದರು ದಾಸರ ಕೀರ್ತನೆಗಳಿಗೆ ನೃತ್ಯ ಸಂಯೋಜಿಸಿ ಪ್ರದರ್ಶನ ನೀಡಿದರು. ಎಲ್ಲಾ ಕಲಾವಿದರಿಗೆ ಪುಸ್ತಕ ನೀಡಿ ಗೌರವಿಸಲಾಯಿತು.

