ಮಂಗಳೂರು:ಭಾರತದಾದ್ಯಂತ ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿ ಸಾವಿರಾರು ಅರ್ಜಿದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಗಸ್ಟ್ 10ರಿಂದ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು, ಹೊಸ ಅಪಾಯಿಂಟ್ ಮೆಂಟ್ ಕಾಯ್ದಿರಿಸುವುದು, ಮರುನಿಗದಿ ಹಾಗೂ ಅರ್ಜಿಗಳ ಪ್ರಕ್ರಿಯೆ ವಿಳಂಬವಾಗಿದೆ.

ಮಂಗಳೂರಿನ ನವಭಾರತ್ ಸರ್ಕಲ್‌ನ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲೂ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಚಿಕ್ಕಮಗಳೂರು, ಮಡಿಕೇರಿ, ಕುಶಾಲನಗರ, ತೀರ್ಥಹಳ್ಳಿ, ಶಿವಮೊಗ್ಗ ಸೇರಿದಂತೆ ದೂರದ ಊರುಗಳಿಂದ ಬಂದ 600ಕ್ಕೂ ಹೆಚ್ಚು ಅರ್ಜಿದಾರರು ಗಂಟೆಗಟ್ಟಲೆ ಕಾಯಬೇಕಾಯಿತು. ಕುಳಿತುಕೊಳ್ಳಲು ಆಸನ, ಕುಡಿಯುವ ನೀರು ಹಾಗೂ ಸೂಕ್ತ ಗಾಳಿ ವ್ಯವಸ್ಥೆಯಿಲ್ಲದೆ ಜನರು ಪರದಾಡಿದರು.

ಸರ್ವರ್ ದೋಷದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಅರ್ಜಿದಾರರು ಆಕ್ರೋಶ ವ್ಯಕ್ತಪಡಿಸಿದರು. ಅಪಾಯಿಂಟ್‌ಮೆಂಟ್ಗಳು ರದ್ದಾಗುತ್ತಿರುವುದರಿಂದ ಮರುಶೆಡ್ಯೂಲ್‌ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮಂಗಳೂರು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಪೊಲೀಸರು ನಿಯೋಜಿಸಲಾಯಿತು.


