ಮಂಗಳೂರು, ಜೂ. 28: ಕನ್ನಡ ಭಾಷೆ, ಸಾಹಿತ್ಯ ಹಾಗೂ ಧಾರ್ಮಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಕನ್ನಡ ಭವನ ಮತ್ತು ಗ್ರಂಥಾಲಯ (ರಿ), ಕನ್ನಡ ಭವನ ಪ್ರಕಾಶನ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ತೊಕ್ಕೊಟ್ಟಿನ ಶ್ರೀ ನಾಗಕನ್ನಿಕಾ ರಕ್ತೇಶ್ವರಿ ದೈವಸ್ಥಾನದ ಅಂಬಾವನ ಧರ್ಮ ಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗಾಗಿ “ಏಕದಿನ ಸಾಹಿತ್ಯ ಅಭಿಯಾನ – ಕನ್ನಡದ ನಡಿಗೆ… ಮಕ್ಕಳ ಕಡೆಗೆ” ಹಾಗೂ ಧರ್ಮ ಶಿಕ್ಷಣ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಂಬಾವನ ಧರ್ಮ ಶಿಕ್ಷಣ ಕೇಂದ್ರದ ಪ್ರಧಾನ ಸಂಚಾಲಕ ಡಾ. ಅರುಣ್ ಉಳ್ಳಾಲ್ ಸ್ವಾಗತಿಸಿದರು. ಅಂಬಾವನ ದೇವಸ್ಥಾನದ ಅಧ್ಯಕ್ಷ ಸುಂದರ ಗಟ್ಟಿ ದೀಪ ಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟಿಸಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಭವನ ಕೇಂದ್ರ ಸಮಿತಿ ಕಾಸರಗೋಡಿನ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್, “ಧರ್ಮದ ತಳಹದಿಯಲ್ಲಿ ಬದುಕುವುದೇ ನಿಜವಾದ ಸಂಸ್ಕೃತಿಯ ಬದುಕು. ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಇತರರನ್ನು ನಮ್ಮಂತೆಯೇ ಪ್ರೀತಿಸುವುದೇ ಉದಾತ್ತ ಧರ್ಮ. ಸಾಹಿತ್ಯ ಮತ್ತು ಸಂಸ್ಕಾರಗಳು ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ” ಎಂದು ಹೇಳಿದರು.
ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಉಮೇಶ್ ರಾವ್ ಕುಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಹಿತ್ಯಾಭಿರುಚಿ ಬೆಳೆಸುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ಅತಿಥಿಗಳಾಗಿ ಕನ್ನಡ ಭವನ ಕಾಸರಗೋಡಿನ ಪ್ರಕಾಶಕಿ ಸಂಧ್ಯಾರಾಣಿ, ಪ್ರತಿಮಾ ಗೋಪಾಲಕೃಷ್ಣ, ಸರೋಜಾ ಧನಂಜಯ, ಮೀನಾಕ್ಷಿ ರಮೇಶ್, ದೇವಿದಾಸ್ ಉಳ್ಳಾಲ್, ಲಕ್ಷ್ಮೀಕಾಂತ ಹಾಗೂ ಮಿಥುನ್ ಕೃಷ್ಣನಗರ ಉಪಸ್ಥಿತರಿದ್ದರು.
ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷೆ ರೇಖಾ ಸುದೇಶ್ ರಾವ್ ಕನ್ನಡ ಸಾಹಿತ್ಯ ಮತ್ತು ಧರ್ಮ ಶಿಕ್ಷಣದ ಮಹತ್ವದ ಕುರಿತು ಮಾತನಾಡಿ, ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ನಿರೂಪಿಸಿದ ಅವರು ವಂದನಾರ್ಪಣೆಯನ್ನೂ ಸಲ್ಲಿಸಿದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಮಾರು 65 ವಿದ್ಯಾರ್ಥಿಗಳು ಭಾಗವಹಿಸಿದ್ದು, ಉತ್ತಮ ಸಾಧನೆ ತೋರಿದ 30 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಶ್ಲೋಕ ಪಠಣ ಹಾಗೂ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿದ್ದು


