ಸರಕಾರದ ವೈದ್ಯಕೀಯ ಅಧಿನಿಯಮದ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಇರಬೇಕಾದ ಆರೋಗ್ಯ ಕೇಂದ್ರ, ಆಸ್ಪತ್ರೆಗಳು ಉಳ್ಳಾಲ ತಾಲೂಕಿನಲ್ಲೇ ಇಲ್ಲ. ಇರುವಂತಹ ಸರಕಾರಿ ಆಸ್ಪತ್ರೆಗಳೆಲ್ಲದರಲ್ಲಿ ವೈದ್ಯರು, ನುರಿತ ಸಿಬ್ಬಂದಿಗಳ ಸಹಿತ ಮೂಲಭೂತ ಸೌಕರ್ಯಗಳಿಂದ ವಂಚನೆಗೊಳಗಾಗಿದೆ. ಆರೋಗ್ಯ ಸಚಿವರಿಗೆ ತನ್ನ ಕ್ಷೇತ್ರವನ್ನೇ ರಾಜ್ಯಕ್ಕೆ ಮಾದರಿ ಮಾಡುವ ಇಚ್ಚಾಸಕ್ತಿಯೇ ಇಲ್ಲದೆ ಇರುವಾಗ ಇನ್ನು ಉಳಿದ ಜಿಲ್ಲೆಯ ಸರಕಾರಿ ಆಸ್ಪತ್ರೆಗಳು ಅಭಿವೃದ್ದಿಗೊಳ್ಳಲು ಸಾಧ್ಯವೇ ?

ಮೊದಲು ಆರೋಗ್ಯ ಮಂತ್ರಿಗಳು ಸರಕಾರಿ ಆಸ್ಪತ್ರೆ ಬಲಪಡಿಸುವ ಕೆಲಸವನ್ನು ತನ್ನ ಸ್ವಕ್ಷೇತ್ರದಿಂದಲೇ ಪ್ರಾರಂಭಿಸಲಿ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರು, ಡಿವೈಎಫ್ಐ ಮುಖಂಡರಾದ ಸಂತೋಷ್ ಬಜಾಲ್ ಸಿಪಿಐಎಂ ಮುಡಿಪು ವಲಯ ಸಮಿತಿ ನೇತೃತ್ವದಲ್ಲಿ ಮುಡಿಪು ಬಸ್ ನಿಲ್ದಾಣದ ಬಳಿ ಆಯೋಜಿಸಿರುವ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಮಾಡಿರುವ ಕರಾರು ಒಪ್ಪಂದ ರದ್ದುಗೊಳಿಸಲು, ಉಳ್ಳಾಲ ತಾಲೂಕು ಆಸ್ಪತ್ರೆ ನಿರ್ಮಿಸಲು, ದ.ಕ ಜಿಲ್ಲೆಯಲ್ಲಿ ಕಿದ್ವಾಯಿ, ಜಯದೇವ ಆಸ್ಪತ್ರೆಗಳನ್ನು ನಿರ್ಮಿಸಲು ಸಹಿತ ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿಗಾಗಿ ನಡೆಸಿದ ಮಾನವ ಸರಪಳಿ, ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದರು.

ಸರಕಾರಿ ಆಸ್ಪತ್ರೆ ಪರಿಸ್ಥಿತಿ ತಿಳಿಯಬೇಕೆಂದರೆ ಮಧ್ಯರಾತ್ರಿ ಭೇಟಿ ನೀಡಬೇಕೆಂದು ಇತ್ತೀಚೆಗೆ ಆರೋಗ್ಯ ಮಂತ್ರಿ ನೀಡಿರುವ ಹೇಳಿಕೆಯು ಕೇವಲ ಪ್ರಚಾರ ಗಿಟ್ಟಿಸುವ ತಂತ್ರ. ವಾಸ್ತವತೆ ಹೇಗಿದೆಯೆಂದರೆ ತನ್ನ ಉಳ್ಳಾಲ ಕ್ಷೇತ್ರದಲ್ಲೇ ಸಂಜೆ 4-30ಕ್ಕೆ ಮುಚ್ಚುವ ಸಮುದಾಯ ಆಸ್ಪತ್ರೆಗಳಿವೆ. ಮುಡಿಪು ಆರೋಗ್ಯ ಕೇಂದ್ರದ್ದೂ ಅದೇ ಪರಿಸ್ಥಿತಿ. ಈಗಿರುವ ಮಧ್ಯರಾತ್ರಿ ಹೋಗುವ ಅಗತ್ಯತೆಯಾದರು ಏನು?. ಸಿಪಿಐಎಂ, ಡಿವೈಎಫ್ಐ ಸರಕಾರಿ ಆಸ್ಪತ್ರೆ ಬಲಡಿಸಲು ನಡೆಸುವ ಹೋರಾಟದ ಈ ನಡುವೆ ಉಳ್ಳಾಲ ತಾಲೂಕು ಆಸ್ಪತ್ರೆ ನಿರ್ಮಿಸುವ ಬಗ್ಗೆ ನೀಡಿರುವ ಭರವಸೆಯೂ ಹೇಳಿಕೆಗಷ್ಟೇ ಸೀಮಿತವಾಗಿರದೆ ಕೂಡಲೇ ಸ್ಥಾಪಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ಅಲ್ಲದೇ ಖಾಸಗೀ ಆಸ್ಪತ್ರೆಗಳೊಂದಿಗೆ ಮಾಡಿರುವ ಕರಾರು ಒಪ್ಪಂದ ಕೂಡಲೇ ರದ್ದುಗೊಳಿಸಲು ಆಗ್ರಹಿಸಿದರು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾಂ ಸುಕುಮಾರ್ ತೊಕ್ಕೊಟ್ಟು ಮಾತನಾಡುತ್ತಾ ಉಳ್ಳಾಲ ತಾಲೂಕು ಘೋಷಣೆಯಾಗಿ ಆರು ವರುಷ ಕಳೆದರೂ ಕ್ಷೇತ್ರದ ಅಮೂಲಾಗ್ರ ಬದಲಾವಣೆ ತರುವಲ್ಲಿ ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ. ಇಲ್ಲಿನ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಒಂದೇ ಬಗೆಯ ಧೋರಣೆಯನ್ನು ಅನುಸರಿಸಿದೆ ಅದು ಖಾಸಗಿ ಆಸ್ಪತ್ರೆಗಳ ಧಣಿಗಳ ಪರವಾಗಿರುವ ಧೋರಣೆ ಎಂದು ದೂರಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಮುಡಿಪು ವಲಯ ಸಮಿತಿ ಕಾರ್ಯದರ್ಶಿ ರಫೀಕ್ ಹರೇಕಳ, ರಜಾಕ್ ಮುಡಿಪು, ಡಿವೈಎಫ್ಐ ಮುಖಂಡರಾದ ರಿಜ್ವಾನ್ ಹರೇಕಳ, ಹರೇಕಳ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶ್ರಫ್ ಹರೇಕಳ, ಅಬೂಬಕ್ಕರ್ ಜಲ್ಲಿ, ಇಸ್ಮಾಯಿಲ್ ಹರೇಕಳ, ರಾಮಚಂದ್ರ ಪಜೀರು, ಸತ್ತಾರ್ ಕೊಜಪಾಡಿ, ರಜಾಕ್ ಮೊಂಟೆಪದವು, ಶಾಫಿ ಮುಡಿಪು, ಫಾರೂಕ್ ಕೊಣಾಜೆ, ಸಿರಾಜ್ ಆಲಡ್ಕ ಮುಂತಾದವರು ಉಪಸ್ಥಿತರಿದ್ದರು

