ಸುರತ್ಕಲ್ ಹೈವೇ ದರೋಡೆ ಪ್ರಕರಣ: ದೋಚಿದ್ದ ಕಾರು ಬಂಟ್ವಾಳದಲ್ಲಿ ಪತ್ತೆ, ಆರೋಪಿಗಳಿಗಾಗಿ ವ್ಯಾಪಕ ಶೋಧ

ಸುರತ್ಕಲ್ ಸಮೀಪದ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿನಿಮಾ ಶೈಲಿಯಲ್ಲಿ ಚರ್ಚೆಗೆ ಗ್ರಾಸವಾದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ದರೋಡೆಕೋರರು ಕೊಂಡೊಯ್ದಿದ್ದ ಕೇರಳ ಮೂಲದ ಚಿನ್ನದ ವ್ಯಾಪಾರಿ ವಿಕಾಸ್ ಅವರಿಗೆ ಸೇರಿದ ಸ್ವಿಫ್ಟ್ ಡಿಸೈರ್ ಕಾರು ಬಂಟ್ವಾಳ ತಾಲೂಕಿನ ಕಲ್ಪನೆ ಪ್ರದೇಶದಲ್ಲಿ ಪತ್ತೆಯಾಗಿದೆ.

ಜೂನ್ 29ರಂದು ನಸುಕಿನ ಜಾವ ಸುಮಾರು 3 ಗಂಟೆ ವೇಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿ ವಿಕಾಸ್ ಪ್ರಯಾಣಿಸುತ್ತಿದ್ದ ಕಾರನ್ನು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ, ಕುಟುಂಬಸ್ಥರಿಗೆ ಜೀವ ಬೆದರಿಕೆ ಒಡ್ಡಿ ಸುಮಾರು ₹20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಕಾರಿನೊಂದಿಗೆ ಪರಾರಿಯಾಗಿತ್ತು.

ಘಟನೆಯ ಬಳಿಕ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರು, ಜೂನ್ 30ರಂದು ಬಂಟ್ವಾಳದ ಕಲ್ಪನೆ ಪ್ರದೇಶದಲ್ಲಿ ಕಾರನ್ನು ಪತ್ತೆಹಚ್ಚಿದ್ದಾರೆ.

ಪತ್ತೆಯಾದ ಕಾರಿನೊಳಗಿನ ದೃಶ್ಯಗಳು ದರೋಡೆಕೋರರ ಕ್ರೌರ್ಯವನ್ನು ಬಯಲಿಗೆಳೆದಿವೆ. ವಾಹನದ ಎಲ್ಲಾ ಸೀಟ್‌ಗಳನ್ನು ಹರಿದು ಹಾಕಲಾಗಿದ್ದು, ಸೀಟ್ ಕವರ್‌ಗಳನ್ನೂ ಕಿತ್ತು ಹಾಕಿರುವುದು ಕಂಡುಬಂದಿದೆ. ಕಾರಿನ ಪ್ರತಿಯೊಂದು ಭಾಗವನ್ನೂ ಪರಿಶೀಲಿಸಿರುವ ದುಷ್ಕರ್ಮಿಗಳು, ಎಲ್ಲಾದರೂ ಚಿನ್ನ ಅಥವಾ ಅಮೂಲ್ಯ ವಸ್ತುಗಳನ್ನು ಅಡಗಿಸಿಟ್ಟಿರಬಹುದೆಂಬ ಅನುಮಾನದಲ್ಲಿ ಸಂಪೂರ್ಣ ವಾಹನವನ್ನು ಜಾಲಾಡಿರುವುದು ತನಿಖೆಯಿಂದ ಗೊತ್ತಾಗಿದೆ.

ಪ್ರಕರಣದ ಭೇದನೆಗಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಲ್ಲಿಯೂ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ಸಿಸಿಟಿವಿ ದೃಶ್ಯಗಳು, ತಾಂತ್ರಿಕ ಮಾಹಿತಿ ಹಾಗೂ ಇತರೆ ಸಾಕ್ಷ್ಯಾಧಾರಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣದ ತನಿಖೆಯನ್ನು ಪಣಂಬೂರು ಪೊಲೀಸ್ ಠಾಣೆ ಅಧಿಕಾರಿಗಳು ಮುಂದುವರಿಸಿದ್ದು, ದರೋಡೆಕೋರರ ಬಂಧನಕ್ಕಾಗಿ ವ್ಯಾಪಕ ಕಾರ್ಯಾಚರಣೆ ನಡೆಯುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!