ಮಂಗಳೂರು: ಭಾರತ ಸರ್ಕಾರ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಮಾನ್ಯತೆ ಪಡೆದ ವಾಕೋ ಇಂಡಿಯಾ ಸಬ್ ಜೂನಿಯರ್ ರಾಷ್ಟ್ರೀಯ ಕಿಕ್ಬಾಕ್ಸಿಂಗ್ ಚಾಂಪಿಯನ್ಶಿಪ್–2026ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ IKMA Institute of Karate Martial Arts ಕ್ರೀಡಾಪಟುಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕರ್ನಾಟಕ ಕಿಕ್ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಅವರು ತಿಳಿಸಿದಂತೆ, ಮಧ್ಯಪ್ರದೇಶದ ಇಂದೋರ್ನಲ್ಲಿ ಜೂನ್ 17ರಿಂದ 21ರವರೆಗೆ ನಡೆದ ಈ ಸ್ಪರ್ಧೆಯಲ್ಲಿ IKMA ಕ್ರೀಡಾಪಟುಗಳು ಒಟ್ಟು 11 ಚಿನ್ನ, 2 ಬೆಳ್ಳಿ ಹಾಗೂ 9 ಕಂಚಿನ ಪದಕಗಳು ಸೇರಿ 22 ಪದಕಗಳನ್ನು ಪಡೆದು ರಾಜ್ಯಕ್ಕೆ ಗೌರವ ತಂದಿದ್ದಾರೆ.

ಅದೇ ರೀತಿಯಲ್ಲಿ ಒಡಿಶಾದ ಖೋರ್ಡಾದಲ್ಲಿ ನಡೆದ ಮತ್ತೊಂದು ರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಆಟಗಾರರು 3 ಚಿನ್ನ, 1 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಈ ಸ್ಪರ್ಧೆಯಲ್ಲಿ ರಾಜ್ಯ ಪಡೆದ ಒಟ್ಟು ಪದಕಗಳಲ್ಲೂ ದಕ್ಷಿಣ ಕನ್ನಡದ IKMA ಕ್ರೀಡಾಪಟುಗಳೇ ಪ್ರಮುಖ ಪಾತ್ರವಹಿಸಿರುವುದು ವಿಶೇಷವಾಗಿದೆ.
ಅಧ್ಯಕ್ಷರು ಹೇಳುವಂತೆ, ರಾಷ್ಟ್ರೀಯ ಮಟ್ಟದಲ್ಲಿ ಒಂದೇ ಜಿಲ್ಲೆ ಅಥವಾ ಒಂದೇ ಅಕಾಡೆಮಿ ದಾಖಲಿಸಿರುವ ಅತ್ಯಧಿಕ ಚಿನ್ನದ ಪದಕಗಳ ಸಾಧನೆ ಇದಾಗಿದ್ದು, ಇದು ಕ್ರೀಡಾಪಟುಗಳ ಶಿಸ್ತು, ಪರಿಶ್ರಮ ಮತ್ತು ತರಬೇತುದಾರರ ಮಾರ್ಗದರ್ಶನಕ್ಕೆ ಸಾಕ್ಷಿಯಾಗಿದೆ.
ಈ ಸಾಧನೆಯೊಂದಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಕ್ರೀಡಾಪಟುಗಳು ಇಟಲಿಯಲ್ಲಿ ನಡೆಯಲಿರುವ ವಿಶ್ವ ಕಿಕ್ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. ತರಬೇತುದಾರರಾದ ನಿತಿನ್ ಎನ್. ಸುವರ್ಣ ಮತ್ತು ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.


