ಮಂಗಳೂರು, ಜು.3: ನಗರಪಾಲಿಕೆಯ ತೆರವು ಕಾರ್ಯಾಚರಣೆಯಿಂದ ಸಂತ್ರಸ್ತರಾಗಿರುವ ಮಂಗಳೂರು ನಗರದ ಸಂಡೆ ಬಜಾರ್ ಸೇರಿದಂತೆ ವಿವಿಧ ಪ್ರದೇಶಗಳ ಬೀದಿಬದಿ ವ್ಯಾಪಾರಿಗಳು ಗುರುವಾರ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು.
ಬೀದಿಬದಿ ವ್ಯಾಪಾರವೇ ತಮ್ಮ ಜೀವನೋಪಾಯವಾಗಿದ್ದು, ಕುಟುಂಬದ ನಿರ್ವಹಣೆಗೆ ಇದನ್ನೇ ಅವಲಂಬಿಸಿರುವುದರಿಂದ ಬದುಕುವ ಹಕ್ಕನ್ನು ರಕ್ಷಿಸಿ, ವ್ಯಾಪಾರಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ವ್ಯಾಪಾರಿಗಳು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಸಂಘದ ಪ್ರತಿನಿಧಿಗಳು ಸೂಚಿಸುವ ಮೂರು ಸೂಕ್ತ ಸ್ಥಳಗಳನ್ನು ಪರಿಶೀಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.



ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಅವಕಾಶ ಇಲ್ಲದ ಕಾರಣ, ನೂರಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳು ಸಾಮೂಹಿಕವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಸರಣಿ ಸಭೆಗಳಲ್ಲಿ ನಿರತರಾಗಿದ್ದ ಜಿಲ್ಲಾಧಿಕಾರಿ ಮಧ್ಯಾಹ್ನ ಸಭೆಯಿಂದ ಹೊರಬಂದು ವ್ಯಾಪಾರಿಗಳ ಅಹವಾಲು ಆಲಿಸಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಸೇರಿದಂತೆ ಸಂಘದ ಪ್ರಮುಖರು ಹಾಗೂ ಸದಸ್ಯರು ಉಪಸ್ಥಿತರಿದ್ದರು.


