ಕೃಷ್ಣಾಪುರ-ಕಾಟಿಪಳ್ಳದಲ್ಲಿ ಸೆ.14ರಿಂದ 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಂಗಳೂರು, ಜುಲೈ 6: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ (ರಿ.), ಕೃಷ್ಣಾಪುರ-ಕಾಟಿಪಳ್ಳ ವತಿಯಿಂದ 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಸೆಪ್ಟೆಂಬರ್ 14ರಿಂದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯು ಹಲವು ವರ್ಷಗಳಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ಪರಿಸರ ಜಾಗೃತಿ, ಶೈಕ್ಷಣಿಕ ಪುರಸ್ಕಾರ ಹಾಗೂ ಆರೋಗ್ಯ ಸಹಾಯ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದರು.

ಈ ಬಾರಿಯ ಗಣೇಶೋತ್ಸವದ ಅಂಗವಾಗಿ ಅಷ್ಟಚತ್ವಾರಿಂಶತ್ ನಾರಿಕೇಳ (48 ತೆಂಗಿನಕಾಯಿ) ಗಣಯಾಗ, ಮೂಡಪ್ಪ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ಗಣೇಶೋತ್ಸವದ ಪೂರ್ವಭಾವಿಯಾಗಿ ಸೆಪ್ಟೆಂಬರ್ 6ರಿಂದ 12ರವರೆಗೆ ಕೃಷ್ಣಾಪುರ ಯುವಕ ಮಂಡಲ ಮೈದಾನದ ಗಣೇಶ ಮಂಟಪದಲ್ಲಿ ‘ಕೃಷ್ಣಾಪುರ ರಂಗಪರ್ವ-2026’ ಅಂತರ್‌ರಾಜ್ಯ ತುಳು ಸಾಮಾಜಿಕ ಹಾಸ್ಯ ನಾಟಕ ಸ್ಪರ್ಧೆ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಮುಂಬೈ ಭಾಗದ ಆಯ್ದ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಕಾರ್ಯಕ್ರಮದ ಲಾಂಛನವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅನಾವರಣಗೊಳಿಸಿ ಚಾಲನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಸ್ಪರ್ಧೆಗೆ ಒಟ್ಟು ಏಳು ಹವ್ಯಾಸಿ ತಂಡಗಳನ್ನು ಆಯ್ಕೆ ಮಾಡಲಾಗುವುದು. ಪ್ರತಿ ತಂಡವು 120ರಿಂದ 150 ನಿಮಿಷಗಳ ಅವಧಿಯ ನಾಟಕ ಪ್ರದರ್ಶಿಸಬೇಕು. ಮುದ್ರಿತ ಸಂಭಾಷಣೆಗೆ ಅವಕಾಶವಿರುವುದಿಲ್ಲ. ಪ್ರತಿ ತಂಡದಲ್ಲಿ ಕನಿಷ್ಠ 10 ಕಲಾವಿದರು ಇರಬೇಕು. ವೇದಿಕೆ, ಬೆಳಕು ಹಾಗೂ ಧ್ವನಿ ವ್ಯವಸ್ಥೆಯನ್ನು ಆಯೋಜಕರು ಒದಗಿಸಲಿದ್ದು, ಭಾಗವಹಿಸುವ ತಂಡಗಳು ರೂ.5,000 ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ. ಪ್ರದರ್ಶನದ ಬಳಿಕ ಈ ಮೊತ್ತವನ್ನು ಹಿಂತಿರುಗಿಸಲಾಗುವುದು ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರೂ.50,000, ದ್ವಿತೀಯ ಬಹುಮಾನ ರೂ.35,000 ಹಾಗೂ ತೃತೀಯ ಬಹುಮಾನ ರೂ.25,000 ನಗದು, ಶಾಶ್ವತ ಫಲಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ವಿವಿಧ ವೈಯಕ್ತಿಕ ವಿಭಾಗಗಳಲ್ಲೂ ವಿಶೇಷ ಬಹುಮಾನಗಳಿದ್ದು, ಬಹುಮಾನ ಪಡೆಯದ ಉಳಿದ ತಂಡಗಳಿಗೆ ತಲಾ ರೂ.8,000 ಗೌರವ ಸಂಭಾವನೆ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಪಿ. ಸುಧಾಕರ ಕಾಮತ್, ಲಕ್ಷ್ಮೀ ಶೇಖರ್ ದೇವಾಡಿಗ, ಪ್ರಶಾಂತ್ ಕುಮಾರ್ ಹಾಗೂ ಸದಸ್ಯರಾದ ವಿಠಲ ಶೆಟ್ಟಿ, ರಾಕೇಶ್ ಕೋಟ್ಯಾನ್ ಮತ್ತು ಅಶೋಕ್ ಕೃಷ್ಣಾಪುರ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!