ಮಂಗಳೂರು: ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ನೀಡುವ ಉದ್ದೇಶದಿಂದ ಆರಂಭಗೊಂಡಿರುವ ‘Mangalore IAS – A School for Civil Services’ ಸಂಸ್ಥೆಯ ಉದ್ಘಾಟನಾ ಸಮಾರಂಭ ಸೋಮವಾರ ಬೆಳಿಗ್ಗೆ ಮಂಗಳೂರಿನ ಸಂದೇಶ ಫೌಂಡೇಶನ್ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.


ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷರಾದ ಅತೀ ವಂದನೀಯ ಡಾ. ಹೆನ್ರಿ ಡಿಸೋಜಾ ಅವರು ರಿಬ್ಬನ್ ಕತ್ತರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಆಶೀರ್ವದಿಸಿದರು. ಬಳಿಕ ರಾಮಕೃಷ್ಣ ಮಠದ ಸ್ವಾಮಿ ಯುಗಾನಂದ ಅವರು ದೀಪ ಪ್ರಜ್ವಲನೆ ನೆರವೇರಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಹೆನ್ರಿ ಡಿಸೋಜಾ, “ನಾವು ಎಲ್ಲಿ ಹುಟ್ಟಿದ್ದೇವೆ ಎನ್ನುವುದು ಮುಖ್ಯವಲ್ಲ. ನಾವು ಯಾವ ಗುರಿಯನ್ನು ತಲುಪುತ್ತೇವೆ, ಸಮಾಜಕ್ಕೆ ಏನು ಕೊಡುಗೆ ನೀಡುತ್ತೇವೆ ಎಂಬುದೇ ಜೀವನದ ನಿಜವಾದ ಸಾಧನೆ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಸ್ವಾಮಿ ಯುಗಾನಂದ, ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ, ಬ್ಯಾಂಕಿಂಗ್, ವೈದ್ಯಕೀಯ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿದ್ದರೂ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಕೊರತೆ ಇತ್ತು. ಇದೀಗ ‘Mangalore IAS’ ಆರಂಭಗೊಂಡಿರುವುದು ಜಿಲ್ಲೆಯ ವಿದ್ಯಾರ್ಥಿಗಳಿಗೆ ದೊಡ್ಡ ವರವಾಗಿದ್ದು, ಹೆಚ್ಚಿನ ಯುವಕರು ಐಎಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಲಿ ಎಂದು ಹಾರೈಸಿದರು.


ಡೈಜಿ ವರ್ಲ್ಡ್ ನಿರ್ದೇಶಕ ವಾಲ್ಟರ್ ನಂದಳಿಕೆ ಮಾತನಾಡಿ, ತಮಗೂ ಪೊಲೀಸ್ ಇಲಾಖೆಗೆ ಸೇರುವ ಕನಸಿದ್ದರೂ ಸೂಕ್ತ ಮಾರ್ಗದರ್ಶನ ಸಿಗಲಿಲ್ಲ. ಆದರೆ ಈಗ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಮತ್ತು ಮಾಹಿತಿ ಸುಲಭವಾಗಿ ಲಭ್ಯವಾಗುತ್ತಿದೆ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆಸಕ್ತಿ ತೋರುತ್ತಿರುವುದು ಸಂತಸದ ಸಂಗತಿ ಎಂದರು. ಈ ಸಂಸ್ಥೆಯಿಂದ ಜಿಲ್ಲೆಯ ಯುವ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಮಿಂಚಲಿ ಎಂದು ಶುಭ ಕೋರಿದರು.



ಸಂದೇಶ ಫೌಂಡೇಶನ್ ನಿರ್ದೇಶಕ ವಂದನೀಯ ರೋಷನ್ ರೋಸಾರಿಯೊ ಸ್ವಾಗತಿಸಿದರು. Mangalore IAS ಸಂಸ್ಥಾಪಕ ಸಂತೋಷ್ ರಾವ್ ಸಂಸ್ಥೆಯ ಉದ್ದೇಶ, ತರಬೇತಿ ವಿಧಾನ ಹಾಗೂ ವಿವಿಧ ಕೋರ್ಸ್ಗಳ ಕುರಿತು ಮಾಹಿತಿ ನೀಡಿದರು.



ಸಂದೇಶ ಸಂಸ್ಥೆಯ ಟ್ರಸ್ಟಿ ರಾಯ್ ಕ್ಯಾಸ್ಟಲಿನೋ ವಂದಿಸಿದರು. ಜಾಸ್ಮಿನ್ ಜೆನ್ನಿಫರ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


