ಲೋಕ ಅದಾಲತ್‌ನಲ್ಲಿ ಮರು ಒಂದಾದ ದಂಪತಿ: ರಾಜಿ ಸಂಧಾನದಿಂದ ಅಂತ್ಯಗೊಂಡ ವಿಚ್ಛೇದನ ಪ್ರಕರಣ

ಬಂಟ್ವಾಳ: ದಾಂಪತ್ಯ ಜೀವನದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯದಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಯೊಂದು, ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನಡೆದ ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿ ಹೊಸ ಜೀವನ ಆರಂಭಿಸಲು ನಿರ್ಧರಿಸಿದ ಹೃದಯಸ್ಪರ್ಶಿ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ.ಪಿ. ಅವರ ನೇತೃತ್ವದಲ್ಲಿ ಸಂಧಾನ ಪ್ರಕ್ರಿಯೆ ನಡೆಯಿತು. ದೀರ್ಘಕಾಲದಿಂದ ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದ ಕೌಟುಂಬಿಕ ವಿವಾದವನ್ನು ಉಭಯ ಪಕ್ಷಗಳ ಅಭಿಪ್ರಾಯ ಆಲಿಸಿ, ಸಮಾಲೋಚನೆ ಹಾಗೂ ಪರಸ್ಪರ ಒಪ್ಪಂದದ ಮೂಲಕ ಯಶಸ್ವಿಯಾಗಿ ಇತ್ಯರ್ಥಗೊಳಿಸಲಾಯಿತು.

ಸಂಧಾನದ ವೇಳೆ ದಾಂಪತ್ಯ ಜೀವನದ ಮಹತ್ವ, ಕುಟುಂಬದ ಮೌಲ್ಯಗಳು ಹಾಗೂ ಪರಸ್ಪರ ಹೊಂದಾಣಿಕೆಯ ಅಗತ್ಯವನ್ನು ನ್ಯಾಯಾಧೀಶರು ಮತ್ತು ಸಂಧಾನಕಾರರು ಮನವರಿಕೆ ಮಾಡಿಕೊಟ್ಟರು. ಇದರಿಂದ ವಿಚ್ಛೇದನದ ಹಾದಿಯಲ್ಲಿದ್ದ ದಂಪತಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಮತ್ತೆ ಒಂದಾಗಿ ದಾಂಪತ್ಯ ಜೀವನ ಮುಂದುವರಿಸಲು ಸಮ್ಮತಿ ಸೂಚಿಸಿದರು.

ಈ ರಾಜಿ ಸಂಧಾನದಲ್ಲಿ ದಂಪತಿಯ ಪರ ವಕೀಲರಾದ ಪಿ. ಬಾನುಶಂಕರ್ ಹಾಗೂ ಪಿ. ಜಯರಾಮ ರೈ ಪ್ರಮುಖ ಪಾತ್ರವಹಿಸಿದರು. ಬಳಿಕ ನ್ಯಾಯಾಲಯದ ಆವರಣದಲ್ಲೇ ದಂಪತಿ ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡು ಹೊಸ ಜೀವನಕ್ಕೆ ಚಾಲನೆ ನೀಡಿದರು. ಈ ದೃಶ್ಯವು ಉಪಸ್ಥಿತರಿದ್ದವರ ಮನಸಿಗೆ ಮುದ ನೀಡಿದ್ದು, ಲೋಕ ಅದಾಲತ್ ಕೇವಲ ಪ್ರಕರಣಗಳ ಇತ್ಯರ್ಥಕ್ಕೆ ಮಾತ್ರವಲ್ಲ, ಕುಟುಂಬಗಳನ್ನು ಮತ್ತೆ ಒಂದುಗೂಡಿಸುವ ಮಾನವೀಯ ವೇದಿಕೆಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!