ಸಾವಿನಲ್ಲೂ ಸಾರ್ಥಕತೆ: ವೈದ್ಯಕೀಯ ಶಿಕ್ಷಣಕ್ಕಾಗಿ ಮೃತದೇಹ ದಾನ ಮಾಡಿದ ಕಾರ್ಮಿನ್ ಪಿರೇರಾ ಕುಟುಂಬಕ್ಕೆ ವ್ಯಾಪಕ ಪ್ರಶಂಸೆ

ದೇರಳಕಟ್ಟೆ: “ಸಾವಿನ ನಂತರವೂ ಬದುಕಬಹುದು, ಸಮಾಜಕ್ಕೆ ಉಪಕಾರವಾಗುವ ಮೂಲಕ” ಎಂಬ ಸಂದೇಶವನ್ನು ಬೆಳ್ತಂಗಡಿ ತಾಲೂಕಿನ ಆರ್ವ ನಿವಾಸಿಗಳಾದ ದಿವಂಗತ ಕಾರ್ಮಿನ್ ಪಿರೇರಾ (70) ಅವರ ಕುಟುಂಬ ತಮ್ಮ ಆದರ್ಶ ನಿರ್ಧಾರದ ಮೂಲಕ ಸಾಕಾರಗೊಳಿಸಿದೆ. ತಮ್ಮ ನಿಧನದ ಬಳಿಕ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗಾಗಿ ತಮ್ಮ ಮೃತದೇಹವನ್ನು ದಾನ ಮಾಡುವ ಮೂಲಕ ಕಾರ್ಮಿನ್ ಪಿರೇರಾ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ.

ಇತ್ತೀಚೆಗೆ ನಿಧನರಾದ ಕಾರ್ಮಿನ್ ಪಿರೇರಾ ಅವರ ಮೃತದೇಹವನ್ನು ಅವರ ಕುಟುಂಬದವರು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಕಾಲೇಜುಗೆ ದಾನವಾಗಿ ಹಸ್ತಾಂತರಿಸಿದರು. ಈ ಮಹತ್ವದ ನಿರ್ಧಾರದ ಹಿಂದಿನ ಪ್ರಮುಖ ಪ್ರೇರಕ ಶಕ್ತಿಯಾಗಿದ್ದು, ಮೃತರ ಪುತ್ರಿ ಹಾಗೂ ಶಿಕ್ಷಕಿ ಪ್ಲೇವಿ ಡಿಸೋಜಾ.

ಕೆಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ), ಮಂಗಳೂರು ದಕ್ಷಿಣ ವಲಯದ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ, ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಆಯೋಜಿಸಿದ್ದ ದೇಹದಾನ ಜಾಗೃತಿ ಶಿಬಿರದಲ್ಲಿ ಭಾಗವಹಿಸಿ, ದೇಹದಾನದ ಮಹತ್ವವನ್ನು ಪ್ಲೇವಿ ಡಿಸೋಜಾ ಅರಿತುಕೊಂಡಿದ್ದರು. ಬಳಿಕ ಈ ವಿಷಯವನ್ನು ಕುಟುಂಬದವರೊಂದಿಗೆ ಚರ್ಚಿಸಿ, ವೈದ್ಯಕೀಯ ಶಿಕ್ಷಣಕ್ಕೆ ಮೃತದೇಹಗಳ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು. ಕುಟುಂಬದವರು ಸಹಮತ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಕಾರ್ಮಿನ್ ಪಿರೇರಾ ಅವರ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಅತ್ಯಂತ ಗೌರವದಿಂದ ಅವರ ಮೃತದೇಹವನ್ನು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಹಸ್ತಾಂತರಿಸಿ ಅಂತಿಮ ಪ್ರಯಾಣವನ್ನು ಸಾರ್ಥಕಗೊಳಿಸಿದರು.

ಒಬ್ಬ ವ್ಯಕ್ತಿಯ ಮರಣದ ನಂತರ ಅವರ ದೇಹವು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ಸಂಶೋಧನೆಗೆ ನೆರವಾಗುವುದು ಅತ್ಯುನ್ನತ ದಾನಗಳಲ್ಲಿ ಒಂದಾಗಿದೆ. ಈ ನಿಸ್ವಾರ್ಥ ಕಾರ್ಯದ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ ಕಾರ್ಮಿನ್ ಪಿರೇರಾ ಅವರ ಕುಟುಂಬದ ನಿರ್ಧಾರವನ್ನು ಸ್ಥಳೀಯರು ಹಾಗೂ ಸಾರ್ವಜನಿಕರು ಹೃತ್ಪೂರ್ವಕವಾಗಿ ಶ್ಲಾಘಿಸಿದ್ದಾರೆ.ಪ್ಲೇವಿ ಡಿಸೋಜಾ ಮತ್ತು ಪತಿ ಫೆಲಿಕ್ಸ್ ಡಿಸೋಜ,ಮಗ ನವೀನ್ ವಿಲ್ಮಾ ಡಿಸೋಜ ಅವರ ಕುಟುಂಬದ ಈ ಆದರ್ಶಪ್ರಾಯ ಕಾರ್ಯವು ಸಮಾಜದಲ್ಲಿ ದೇಹದಾನದ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದರ ಜೊತೆಗೆ, ಇತರರಿಗೂ ಇಂತಹ ಮಾನವೀಯ ನಿರ್ಧಾರಗಳನ್ನು ಕೈಗೊಳ್ಳಲು ಪ್ರೇರಣೆಯಾಗಲಿದೆ.

ಈ ಸಂದರ್ಭದಲ್ಲಿ ಎ.ಐ.ಸಿ.ಯು ಕರ್ನಾಟಕ ರಾಜ್ಯಾಧ್ಯಕ್ಷ ಅಲ್ವಿನ್ ಡಿಸೋಜ,ಎಂ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ,
ಕೆಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ, ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್ , ಅಲ್ಬರ್ಟ್ ಸುನೀಲ್ ಮೋನಿಸ್, ಮಾಜಿ ಅಧ್ಯಕ್ಷರಾದ ಲ್ಯಾನ್ಸಿ ಡಿಕುನ್ಹಾ, ಸ್ಟ್ಯಾನಿ ಲೋಬೊ, ಹಾಗೂ ವಲಯ ಮತ್ತು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!