ಭೂಕುಸಿತಕ್ಕೆ ಅವೈಜ್ಞಾನಿಕ ಬೆಟ್ಟ ಕೊರೆಯುವಿಕೆಯೇ ಕಾರಣ: ಎಎಪಿ ಆರೋಪ

ಮಂಗಳೂರು:ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಭೂಕುಸಿತ ಮತ್ತು ತಡೆಗೋಡೆ ಕುಸಿತ ಪ್ರಕರಣಗಳಿಗೆ ಹವಾಮಾನ ವೈಪರೀತ್ಯದ ಜೊತೆಗೆ ಅವೈಜ್ಞಾನಿಕ ಹಾಗೂ ಅನಿಯಂತ್ರಿತ ಬೆಟ್ಟ ಕೊರೆಯುವಿಕೆ ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷ, ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬೆಟ್ಟ ಕೊರೆಯುವಿಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ತಕ್ಷಣ ಕಠಿಣ ಕಾನೂನು ಕ್ರಮವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದೆ.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ಮಾತನಾಡಿ , ಮೂಡಬಿದ್ರೆ ಸಮೀಪದ ಕೇಮಾರು ಮಠದ ರಸ್ತೆ ಹಾಗೂ ಗುರುಪುರ ಭಾಗದಲ್ಲಿ ಸ್ಥಳೀಯ ಪಂಚಾಯಿತಿಗಳ ಸಹಕಾರದೊಂದಿಗೆ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಅಗೆಯಲಾಗುತ್ತಿದೆ ಎಂದು ಆರೋಪಿಸಿದರು. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ನಿಯಂತ್ರಣವಿಲ್ಲದೆ ನಡೆಯುತ್ತಿರುವ ಇಂತಹ ಕಾಮಗಾರಿಗಳಿಂದ ಮಾನವ ಜೀವ ಹಾಗೂ ಆಸ್ತಿಪಾಸ್ತಿಗೆ ಅಪಾಯ ಹೆಚ್ಚುತ್ತಿದೆ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅವೈಜ್ಞಾನಿಕ ಕಾಮಗಾರಿಯಿಂದ ಸಂಭವಿಸಿದ ಭೂಕುಸಿತದಲ್ಲಿ ಅಮಾಯಕರು ಮೃತಪಟ್ಟಿದ್ದರೂ ಇದುವರೆಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ. ಕೊಡಗಿನಲ್ಲಿ ನಡೆದ ಭೂಕುಸಿತದಂತಹ ದುರಂತಗಳಿಂದಲೂ ಸರ್ಕಾರ ಪಾಠ ಕಲಿತಿಲ್ಲ ಎಂದು ಅವರು ಟೀಕಿಸಿದರು.

ಗೋವಾ ರಾಜ್ಯದ ಮಾದರಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ‘ಅಭಿವೃದ್ಧಿ ರಹಿತ ವಲಯ’ (No-Development Zone) ಎಂದು ಘೋಷಿಸಬೇಕು. ಕರಾವಳಿ ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಬೆಟ್ಟ ಕೊರೆಯುವಿಕೆಗೆ ಕಠಿಣ ನಿಯಂತ್ರಣ ಹೇರಬೇಕು. ಅವೈಜ್ಞಾನಿಕ ಕಾಮಗಾರಿಗಳಿಂದ ಜೀವಹಾನಿಗೆ ಕಾರಣವಾಗುವ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ಭೂಕುಸಿತ ಅಪಾಯವಿರುವ ಪ್ರದೇಶಗಳಲ್ಲಿ ತಜ್ಞರ ಸಮಿತಿಯಿಂದ ವೈಜ್ಞಾನಿಕ ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಪಿಂಟೊ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸೀಮಾ ಮಡಿವಾಳ, ಜಿಲ್ಲಾ ಕಾರ್ಯದರ್ಶಿಗಳಾದ ಕಬೀರ್ ಕಾಟಿಪಳ್ಳ, ಹಬೀಬ್ ಖಾದರ್, ವಾಸುದೇವ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!