10ನೇ ತರಗತಿವರೆಗೆ ಶಾಲೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಜಂಕ್ ಫುಡ್‌ಗೆ ನಿಷೇಧ: ಯು.ಟಿ. ಖಾದರ್

ಮಂಗಳೂರು: ಬರ್ಗರ್, ಪಿಜ್ಜಾ ಸೇರಿದಂತೆ ಜಂಕ್ ಫುಡ್‌ಗಳಿಂದ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 10ನೇ ತರಗತಿವರೆಗಿನ ಶಾಲೆಗಳು ಹಾಗೂ ಸರ್ಕಾರಿ ಆಸ್ಪತ್ರೆ ಆವರಣಗಳಲ್ಲಿ ಇಂತಹ ಆಹಾರಗಳ ಮಾರಾಟವನ್ನು ನಿಷೇಧಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಅಭಿವೃದ್ಧಿ ಮತ್ತು ಕುಂದುಕೊರತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಆಹಾರ ಸುರಕ್ಷತೆ ವ್ಯವಸ್ಥೆಯನ್ನು ಬಲಪಡಿಸಲು ಬೆಂಗಳೂರಿನ ಆಹಾರ ಪರೀಕ್ಷಾ ಪ್ರಯೋಗಾಲಯವನ್ನು ಅತ್ಯಾಧುನಿಕ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು ಎಂದರು.

ಆಹಾರದ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ, ದೊಡ್ಡ ಕಂಪನಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಾಗುವಂತೆ ಅತ್ಯಾಧುನಿಕ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದು ಹೇಳಿದರು.

ಅನಾರೋಗ್ಯಕರ ಆಹಾರ ಸೇವನೆಯಿಂದ ಕಿಡ್ನಿ, ಕ್ಯಾನ್ಸರ್ ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿದ್ದು, ಶಾಲೆಗಳಲ್ಲಿ ಆರೋಗ್ಯಕರ ಆಹಾರ ಒದಗಿಸುವ ಮೂಲಕ ಮಕ್ಕಳನ್ನು ಜಂಕ್ ಫುಡ್‌ನಿಂದ ದೂರವಿಡಲು ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಸರ್ಕಾರಿ ಆಸ್ಪತ್ರೆಗಳ ಕ್ಯಾಂಟೀನ್‌ಗಳಲ್ಲಿಯೂ ಜಂಕ್ ಫುಡ್ ಮಾರಾಟಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!