ಅಮೃತ ಪ್ರಕಾಶ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ; ವಿಶೇಷ ಸಂಚಿಕೆ ಬಿಡುಗಡೆ

ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಮಂಗಳವಾರ ನಗರದ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್ ವಹಿಸಿ ಮಾತನಾಡಿ, ಯಾವುದೇ ಪತ್ರಿಕೆ ಕೇವಲ ಸುದ್ದಿಗಳನ್ನು ಪ್ರಕಟಿಸುವ ಮಾಧ್ಯಮವಲ್ಲ; ಅದು ಸಮಾಜದ ಧ್ವನಿ, ಸಂಸ್ಕೃತಿಯ ಪ್ರತಿಬಿಂಬ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಶಕ್ತಿಯಾಗಿದೆ. ಕಳೆದ 13 ವರ್ಷಗಳಿಂದ ಅಮೃತ ಪ್ರಕಾಶ ಪತ್ರಿಕೆ ಸಮಾಜಮುಖಿ ವಿಚಾರಗಳು, ಮಹಿಳಾ ಸಬಲೀಕರಣ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಮೌಲ್ಯಗಳನ್ನು ಜನರಿಗೆ ತಲುಪಿಸುವ ಮೂಲಕ ಶ್ರೇಷ್ಠ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅಮೃತ ಪ್ರಕಾಶದ ವಿಶೇಷ ಸಂಚಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹಾಗೂ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಾ. ಮಾಲತಿ ಶೆಟ್ಟಿ ಮಾಣೂರು ಅವರು ಕಳೆದ 13 ವರ್ಷಗಳಿಂದ ಗುಣಮಟ್ಟದ ಹಾಗೂ ಮೌಲ್ಯಯುತ ಪತ್ರಿಕೆಯನ್ನು ಸಮಾಜಕ್ಕೆ ನೀಡುತ್ತಾ ನಿರಂತರ ಸಾಹಿತ್ಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿ, ಪತ್ರಿಕೆಯು ಇನ್ನಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಸಮಾಜಸೇವಕಿ ಹಾಗೂ ಉದ್ಯಮಿ ಲಯನ್ ಆಶಾ ರಾವ್ ಆರೂರು ಭಾಗವಹಿಸಿದ್ದರು.ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸಿದರು. ಲೇಖಕಿ ಹಾಗೂ ಶಿಕ್ಷಕಿ ಸುರೇಖಾ ಯಾಳವಾರ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!