ಗಂಗಾಧರ ಪಾಂಗಳ ಹತ್ಯೆ ಪ್ರಕರಣ: ನಾಲ್ವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು, ಜು. 28: ಬೈಕಂಪಾಡಿಯ ಮೀನಕಳಿಯ ಬಳಿ 12 ವರ್ಷಗಳ ಹಿಂದೆ ಮೀನುಗಾರ ಮುಖಂಡ ಗಂಗಾಧರ ಪಾಂಗಳ (55) ಅವರನ್ನು ವಾಹನ ಡಿಕ್ಕಿ ಹೊಡೆಸಿ ಹತ್ಯೆಗೈದ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಸತೀಶ್ ಬೈಕಂಪಾಡಿ (58), ಹರೀಶ್ ಬೈಕಂಪಾಡಿ (60), ಭಾಸ್ಕರ್ ಬೈಕಂಪಾಡಿ (61) ಹಾಗೂ ಪುಷ್ಪರಾಜ್ (47) ಶಿಕ್ಷೆಗೆ ಗುರಿಯಾದ ಆರೋಪಿಗಳು. ದೇವಸ್ಥಾನ ಹಾಗೂ ಶಾಲಾ ಕಟ್ಟಡ ನಿರ್ಮಾಣದ ವಂತಿಗೆ ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಗಂಗಾಧರ ಪಾಂಗಳ ಅವರು ಸತೀಶ್ ಮತ್ತು ಭಾಸ್ಕರ್ ವಿರುದ್ಧ ಕ್ರಮ ಕೈಗೊಳ್ಳಲು ಕಾರಣರಾಗಿದ್ದರಿಂದ ದ್ವೇಷ ಬೆಳೆಸಿಕೊಂಡು ಹತ್ಯೆಯ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು.

2014ರ ಮೇ ತಿಂಗಳಲ್ಲಿ ಬೈಕಂಪಾಡಿ–ಮೀನಕಳಿಯ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಗಂಗಾಧರ ಪಾಂಗಳ ಅವರ ವಾಹನಕ್ಕೆ ಉದ್ದೇಶಪೂರ್ವಕವಾಗಿ ಕಾರು …

ಡಿಕ್ಕಿ ಹೊಡೆಸಿ ಹತ್ಯೆ ಮಾಡಲಾಗಿತ್ತು. ಬಳಿಕ ಇದನ್ನು ಅಪಘಾತದಂತೆ ಬಿಂಬಿಸಲು ಯತ್ನಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ವಾಹನವನ್ನು ಗ್ಯಾರೇಜ್‌ನಲ್ಲಿ ರಿಪೇರಿಗೆ ಇಟ್ಟು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಲಾಗಿತ್ತು. ಆರಂಭದಲ್ಲಿ ಅಪಘಾತ ಪ್ರಕರಣವಾಗಿ ದಾಖಲಾಗಿದ್ದರೂ, ನಂತರ ಅದು ಪೂರ್ವನಿಯೋಜಿತ ಕೊಲೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಜು.21ರಂದು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ, ಜು.27ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ನಾಲ್ವರಿಗೆ ಜೀವಾವಧಿ ಶಿಕ್ಷೆಯೊಂದಿಗೆ ತಲಾ ₹15,000 ದಂಡ ಹಾಗೂ ಸಾಕ್ಷ್ಯ ನಾಶ ಪ್ರಕರಣದಲ್ಲಿ ಎರಡು ವರ್ಷಗಳ ಸಾದಾ ಶಿಕ್ಷೆ ಮತ್ತು ತಲಾ ₹1,000 ದಂಡ ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ₹50,000 ಅನ್ನು ಮೃತರ ಪುತ್ರಿಗೆ ಪರಿಹಾರವಾಗಿ ನೀಡಲು ಹಾಗೂ ಉಳಿದ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಲು ನ್ಯಾಯಾಲಯ ಆದೇಶಿಸಿದೆ. ಎಲ್ಲ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!