ಮಂಗಳೂರು, ಜು. 28: ಮಂಗಳೂರು ನಗರದ ಹಂಪನಕಟ್ಟೆ ಪ್ರದೇಶದಲ್ಲಿರುವ ಯುರೋಪ್ ಶೂ ಅಂಗಡಿಗೆ ಸೋಮವಾರ ಬೆಳಗ್ಗೆ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿ ಸಂಪೂರ್ಣವಾಗಿ ಭಸ್ಮಗೊಂಡಿದೆ.

ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಇನ್ನೆರಡು ಅಂಗಡಿಗಳಿಗೂ ವ್ಯಾಪಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಅವಘಡದಿಂದ ಅಪಾರ ಪ್ರಮಾಣದ ಆಸ್ತಿ ಹಾನಿ ಸಂಭವಿಸಿದೆ. ಬೆಂಕಿಯ ನಿಖರ ಕಾರಣ ಹಾಗೂ ನಷ್ಟದ ಪ್ರಮಾಣದ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

