ಮಂಗಳೂರು:ಜಂತರ್ ಮಂತರ್ ಪ್ರತಿಭಟನೆಗೆ ವಿದೇಶಿ ಫಂಡ್ ಬಂದಿರುವುದಾಗಿ ಆರೋಪ ಮಾಡಲಾಗುತ್ತಿದೆ.
ಫಂಡ್ ಬರುವವರೆಗೂ ಅಮಿತ್ ಶಾ , ಜೇಮ್ಸ್ ಬಾಂಡ್ ಅಜಿತ್ ಧೋವಲ್ ಕಡ್ಲೆ ಕಾಯಿ ತಿನ್ನುತ್ತಿದ್ರ ಎಂದು ಕಾಂಗ್ರೆಸ್ ವಕ್ತಾರ ಎಂ.ಜಿ.ಹೆಗ್ಡೆ ಲೇವಡಿ ಮಾಡಿದ್ದಾರೆ.ಇವರ ಇಂಟೆಲಿಜೆನ್ಸ್ ಏಜನ್ಸಿ ಕತ್ತೆಯನ್ನ ಕಾಯುತ್ತ ಇತ್ತ ಎಂದು ಪ್ರಶ್ನಿಸಿದ ಅವರು ವಿದೇಶಿ ಫಂಡ್ ಆರ್ ಎಸ್.ಎಸ್.ಗೆ ಬರುತ್ತಾ ಇದೆ ಎಂದು ಆರೋಪಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಬಿಜೆಪಿ ಹಾಗೂ ಆರ್ಎಸ್ಎಸ್ನಿಂದ ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ನೇರವಾಗಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಅವಾಚ್ಯ ಪದಗಳನ್ನು ಬಳಸಿ ಬೆದರಿಕೆ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ ಎಂದೂ ದೂರಿದರು.

ರೈತರು, ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಹೋರಾಟಗಾರರನ್ನು ದೇಶದ್ರೋಹಿಗಳು, ಪಾಕಿಸ್ತಾನಿಗಳು, ಬಾಂಗ್ಲಾದೇಶೀಯರು ಮತ್ತು ಭಯೋತ್ಪಾದಕರು ಎಂದು ಬಿಂಬಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಅಲ್ಲದೆ, ವೈಯಕ್ತಿಕ ನಿಂದನೆ ಹಾಗೂ ಬೆದರಿಕೆಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಹೇಳಿದರು.

ನಕಲಿ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ವ್ಯಕ್ತಿಗಳ ತೇಜೋವಧೆ ಮಾಡುವ ಉದ್ದೇಶದಿಂದ ಮಿತಿಮೀರಿದ ಪೋಸ್ಟ್ಗಳನ್ನು ಪ್ರಕಟಿಸಲಾಗುತ್ತಿದೆ. ಇಂತಹ ಸಂಸ್ಕೃತಿ ಸಮಾಜಕ್ಕೆ ಹಿತಕರವಲ್ಲ. ಕೆಲವೊಮ್ಮೆ ನಮ್ಮ ಕಡೆಯಿಂದಲೂ ಪ್ರತಿಕ್ರಿಯೆಗಳು ಬಂದಿರುವುದು ನಿಜ. ಆದರೆ, ಯಾರೇ ಆಗಲಿ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸುವ ಸಂಸ್ಕೃತಿಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹಾಗೂ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ತಮ್ಮ ಕಾರ್ಯಕರ್ತರಿಗೆ ವೈಯಕ್ತಿಕ ನಿಂದನೆ ಹಾಗೂ ಬೆದರಿಕೆಗಳಿಂದ ದೂರವಿರಲು ಸೂಚನೆ ನೀಡಬೇಕು ಎಂದು ಎಂ.ಜಿ. ಹೆಗಡೆ ಆಗ್ರಹಿಸಿದರು.

ಇದೇ ವೇಳೆ, ವಿದ್ಯಾರ್ಥಿಗಳ ಬಳಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆಯಾಚಿಸಬಾರದಿತ್ತು ಎಂಬ ಚಲನಚಿತ್ರ ನಟ ಅನಂತ್ ನಾಗ್ ಅವರ ಹೇಳಿಕೆಯನ್ನು ಖಂಡಿಸಿದ ಹೆಗಡೆ, ಕೀಳುಮಟ್ಟದ ರಾಜಕಾರಣವನ್ನು ಅರಿಯದೆ ಅದನ್ನು ‘ಗುಡ್ ಗವರ್ನೆನ್ಸ್’ ಎಂದು ಹೊಗಳಿರುವುದು ಹಾಗೂ ‘ಅಂಟು ರೋಗ’ ಎಂಬ ಪದಪ್ರಯೋಗ ಮಾಡಿರುವುದು ಸರಿಯಲ್ಲ. ಅನಂತ್ ನಾಗ್ ಅವರು ತಮ್ಮ ಹೇಳಿಕೆಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯಕ್, ಪ್ರಮುಖರಾದ ಸುಹಾನ್ ಆಳ್ವ, ರಿಷೇಲ್ ಶ್ರುತಿ, ಶಾನ್ ಶಿರಿ, ಪ್ರಜ್ವಲ್ ಹಾಗೂ ಸಂತೋಷ್ ಸುಳ್ಯ ಉಪಸ್ಥಿತರಿದ್ದರು.

