ಸಮಾನ ಮನಸ್ಕರನ್ನು ಒಗ್ಗೂಡಿಸಿ ಹೊಸ ರಾಜಕೀಯ ಪಕ್ಷ: ಚೇತನ್ ಅಹಿಂಸಾ

ಮಂಗಳೂರು:ರಾಜ್ಯದಲ್ಲಿ ಹೊಸ ರಾಜಕೀಯ ಚಳವಳಿಯ ಅಗತ್ಯವಿದ್ದು, ಸಮಾನ ಮನಸ್ಕರನ್ನು ಒಗ್ಗೂಡಿಸಿ ಮುಂದಿನ ಜನವರಿಯೊಳಗೆ ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಕಟ್ಟಲಾಗುವುದು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ನಡೆಸಿ ಸಮಾನ ಮನಸ್ಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಕ್ಷೇತ್ರಗಳ ಜನರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಹಿಂದುತ್ವ ಸೇರಿದಂತೆ ವಿವಿಧ ಸಿದ್ಧಾಂತ ಹಾಗೂ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಹಲವು ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಇಂತಹ ನಿರ್ದಿಷ್ಟ ಅಜೆಂಡಾಗಳನ್ನು ಹೊರತುಪಡಿಸಿ, ಸಮಾನ ಮನಸ್ಕರನ್ನು ಒಗ್ಗೂಡಿಸುವ ಹೊಸ ರಾಜಕೀಯ ವೇದಿಕೆಯ ಅಗತ್ಯವಿದೆ ಎಂದರು.

ಪ್ರಜಾಕೀಯ ಪಕ್ಷದ ಸಿದ್ಧಾಂತದ ಬಗ್ಗೆ ತಮಗೆ ಮನವರಿಕೆಯಾಗಿಲ್ಲ. ಆ ಪಕ್ಷವನ್ನು ಕಟ್ಟಿದವರಿಗೂ ತಮ್ಮ ರಾಜಕೀಯ ಸಿದ್ಧಾಂತದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಅವರು ಟೀಕಿಸಿದರು. ಈಗಿರುವ ರಾಜಕೀಯ ಪಕ್ಷಗಳು ಕೂಡ ಜನರ ಸಮಸ್ಯೆಗಳಿಗಿಂತ ವೈಯಕ್ತಿಕ ಲಾಭಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಆರೋಪಿಸಿದರು.

ತಮಿಳುನಾಡಿನಲ್ಲಿ ಟಿವಿಕೆ ಪಕ್ಷವು ಜನಪ್ರಿಯತೆಯ ಆಧಾರದಲ್ಲಿ ಮುನ್ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಗಳು ಜನರ ನಡುವೆ ನೇರವಾಗಿ ಬಂದು ಅವರ ಸಮಸ್ಯೆಗಳನ್ನು ಆಲಿಸಿದರೆ, ನೆಲಮಟ್ಟದ ನೈಜ ಸಮಸ್ಯೆಗಳ ಅರಿವಾಗುತ್ತದೆ ಎಂದು ಹೇಳಿದರು.

ಬಿಡದಿಯನ್ನು ಟೌನ್‌ಶಿಪ್ ಆಗಿ ಪರಿವರ್ತಿಸುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಅವರು, ಬಿಡದಿಯ ಸ್ವರೂಪ ಬದಲಾಗದಂತೆ ತಡೆಯಲು ಹೋರಾಟ ನಡೆಸುವುದಾಗಿ ತಿಳಿಸಿದರು. ರಾಜ್ಯದ ಜನರ ನೈಜ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಹೊಸ ರಾಜಕೀಯ ಶಕ್ತಿಯನ್ನು ರೂಪಿಸುವ ಉದ್ದೇಶ ಹೊಂದಿರುವುದಾಗಿ ಅವರು ಹೇಳಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!