ಮಂಜೇಶ್ವರ: ಕುಂಬಳೆ ಪಂಚಾಯತ್ ವ್ಯಾಪ್ತಿಯ ನಾಯ್ಕಾಪು ಪ್ರದೇಶದಲ್ಲಿ ಸಾರ್ವಜನಿಕ ರಸ್ತೆ ಬದಿಗೆ ಕಾರಿನಲ್ಲಿ ಬಂದು ಗೋಣಿಚೀಲಗಳಲ್ಲಿ ತುಂಬಿದ್ದ ತ್ಯಾಜ್ಯವನ್ನು ಎಸೆದು ವಿಕೃತಿ ಮೆರೆದಿರುವುದು ಬೆಳಕಿಗೆ ಬಂದಿದೆ.
ಶುಕ್ರವಾರ ಬೆಳಿಗ್ಗೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ರಸ್ತೆ ಬದಿ ವಾಹನ ನಿಲ್ಲಿಸಿ, ಮೂರು ಗೋಣಿಚೀಲಗಳಲ್ಲಿದ್ದ ಕಸವನ್ನು ಯಾರಿಗೂ ಕಾಣದಂತೆ ಸುರಿದು ಪರಾರಿಯಾಗಿದ್ದಾನೆ.

ಈ ಸಂಪೂರ್ಣ ಕೃತ್ಯವು ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಎಚ್ಚೆತ್ತ ಸ್ಥಳೀಯ ನಾಗರಿಕರು ವಿಡಿಯೋ ದೃಶ್ಯಾವಳಿಗಳನ್ನು ಸಂಗ್ರಹಿಸಿ ತಕ್ಷಣವೇ ಪಂಚಾಯತ್ ಅಧಿಕಾರಿಗಳಿಗೆ ಒದಗಿಸಿದ್ದಾರೆ.
ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಇಂತಹ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಪಂಚಾಯತ್ ಅಧಿಕಾರಿಗಳು ಕುಂಬಳೆ ಪೊಲೀಸ್ ಠಾಣೆಗೆ ಅಧಿಕೃತ ದೂರು ದಾಖಲಿಸಿದ್ದಾರೆ.


