ಮಂಗಳೂರು: ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರದ ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ 60ಕ್ಕೂ ಅಧಿಕ ನಿವೃತ್ತ ವೀರ ಯೋಧರು ಹಾಗೂ ವೀರನಾರಿಯರನ್ನು ಗೌರವಿಸುವ ವಿಶೇಷ ಸನ್ಮಾನ ಕಾರ್ಯಕ್ರಮ ಭಾನುವಾರ ಕದ್ರಿ ಬಂಜನ್ ಚಾವಡಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ಹಿಲ್‌ಸೈಡ್ ಆರ್ಕಿಟೆಕ್ಟ್‌ನ ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣ ಬಂಜನ್, ದೇಶದ ಭದ್ರತೆಗೆ ಪಾಕಿಸ್ತಾನ, ಚೀನಾ ಸೇರಿದಂತೆ ಬಾಹ್ಯ ಶಕ್ತಿಗಳ ಜತೆಗೆ ದೇಶದೊಳಗಿನ ದೇಶದ್ರೋಹಿಗಳಿಂದಲೂ ಸವಾಲು ಎದುರಾಗುತ್ತಿದೆ. ಇಂತಹ ಸವಾಲುಗಳನ್ನು ನಿಯಂತ್ರಿಸುವುದು ಅತ್ಯಂತ ಕಷ್ಟದ ಕಾರ್ಯವಾಗಿದ್ದು, ದೇಶದ ಸೈನಿಕರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯಿಂದಾಗಿ ಕೋಟ್ಯಂತರ ಜನರು ಸುರಕ್ಷಿತವಾಗಿ ಬದುಕಲು ಸಾಧ್ಯವಾಗಿದೆ ಎಂದು ಹೇಳಿದರು.

ದೇಶದ ಆಂತರಿಕ ಅಭದ್ರತೆಯನ್ನು ನಿವಾರಿಸಿದಾಗ ಮಾತ್ರ ಭಾರತ ಇನ್ನಷ್ಟು ಪ್ರಗತಿಪರ ಹಾಗೂ ಬಲಿಷ್ಠ ರಾಷ್ಟ್ರವಾಗಿ ರೂಪುಗೊಳ್ಳಲು ಸಾಧ್ಯ. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಪೋಷಕರೇ ಮೊದಲ ಗುರುಗಳಾಗಿದ್ದು, ಅವರು ತಮ್ಮ ಹೆತ್ತವರ ನಡೆ-ನುಡಿಗಳನ್ನು ಗಮನಿಸಿ ಕಲಿಯುತ್ತಾರೆ. ಪೋಷಕರು ಮಕ್ಕಳಿಗೆ ಬೇರೆ ಯಾವುದೇ ಸಂಪತ್ತು ನೀಡಲು ಸಾಧ್ಯವಾಗದಿದ್ದರೂ ಉತ್ತಮ ಶಿಕ್ಷಣ ಮತ್ತು ಉತ್ತಮ ಸಂಸ್ಕಾರವನ್ನು ನೀಡಬೇಕು ಎಂದು ಅವರು ಸಲಹೆ ನೀಡಿದರು.

ವಿಕಸಿತ ಭಾರತದ ನಿರ್ಮಾಣವು ಸರ್ಕಾರವೊಂದರ ಹೊಣೆಗಾರಿಕೆಯಲ್ಲ. ದೇಶದ ಪ್ರತಿಯೊಬ್ಬ ನಾಗರಿಕರೂ ತಮ್ಮದೇ ಆದ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗಲಿದೆ ಎಂದು ರಾಧಾಕೃಷ್ಣ ಬಂಜನ್ ಹೇಳಿದರು.


ಕಾರ್ಯಕ್ರಮದಲ್ಲಿ ಬಿಎಸ್‌ಎಫ್‌ನ ನಿವೃತ್ತ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಅಧ್ಯಕ್ಷ ಸುಂದರ್ ಕುಲಾಲ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಬಿಎಸ್‌ಎನ್‌ಎಲ್‌ನ ನಿವೃತ್ತ ಡಿಜಿಎಂ ಐತಪ್ಪ ಮೂಲ್ಯ, ಪ್ರಧಾನ ಸಂಘಟಕ ಹಾಗೂ ಎನ್‌ಸಿಸಿ ಅಧಿಕಾರಿ, ನೇವಲ್ ವಿಂಗ್ ಲೆಫ್ಟಿನೆಂಟ್ ಕಮಾಂಡರ್ ಡಾ. ಯತೀಶ್ ಕುಮಾರ್, ಸಹ ಸಂಘಟಕರಾದ ನಿವೃತ್ತ ನಾಯಬ್ ಸುಬೇದಾರ್ ಮೋಹನ್ ಕಡಂಬಾರ್, ನಿವೃತ್ತ ನಾಯಬ್ ಗೋಪಾಲ್ ಎನ್. ಕುಲಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವೆಂಕಪ್ಪ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು.



