ಮಂಗಳೂರಿನಲ್ಲಿ ‘NIEPID ದಿಶಾ’ ಪಠ್ಯಕ್ರಮದ ಮೂರು ದಿನಗಳ ಆರ್‌ಸಿಐ ತರಬೇತಿ ಆರಂಭ

ಮಂಗಳೂರು:ವಿಶೇಷಚೇತನರ ಕೌಶಲ್ಯಾಭಿವೃದ್ಧಿ, ಪುನರ್ವಸತಿ ಹಾಗೂ ಸಬಲೀಕರಣಕ್ಕಾಗಿ ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧೀನದಲ್ಲಿರುವ ದಾವಣಗೆರೆಯ ಕಾಂಪೋಸಿಟ್ ರೀಜನಲ್ ಸೆಂಟರ್ (CRC) ವತಿಯಿಂದ ಆಯೋಜಿಸಿರುವ ‘NIEPID ದಿಶಾ ಪಠ್ಯಕ್ರಮ’ ಕುರಿತ ಮೂರು ದಿನಗಳ ಆರ್‌ಸಿಐ ಸಿಆರ್‌ಇ ತರಬೇತಿ ಕಾರ್ಯಕ್ರಮ ನಗರದ ಸಾನಿಧ್ಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಆರಂಭಗೊಂಡಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಎಂ.ಎಸ್., ವಿಶೇಷಚೇತನ ಮಕ್ಕಳೊಂದಿಗೆ ಕಾರ್ಯನಿರ್ವಹಿಸುವುದು ಅತ್ಯಂತ ಜವಾಬ್ದಾರಿಯುತ ಹಾಗೂ ಸೇವಾ ಮನೋಭಾವದ ಕೆಲಸವಾಗಿದೆ. ಮಕ್ಕಳ ಸಾಮರ್ಥ್ಯವನ್ನು ಗುರುತಿಸಿ, ಅವರ ಕೌಶಲ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ವಿಶೇಷ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಮೂರು ದಿನಗಳ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹೊಸ ಕೌಶಲ್ಯ ಹಾಗೂ ಜ್ಞಾನವನ್ನು ಪಡೆದು ವಿಶೇಷಚೇತನ ಮಕ್ಕಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಬೇಕು. ಇಂತಹ ಕಾರ್ಯಾಗಾರಗಳು ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಹೆಚ್ಚಿನ ನೆರವು ನೀಡಲಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಕೋರ್ಸ್ ಸಂಯೋಜಕ, ದಾವಣಗೆರೆ ಸಿಆರ್‌ಸಿಯ ಕ್ಲಿನಿಕಲ್ ಸೈಕಾಲಜಿ ವಿಭಾಗದ ಕ್ಲಿನಿಕಲ್ ಅಸಿಸ್ಟೆಂಟ್ ರಾಜು ತಲತೋಟಿ ಮಾತನಾಡಿ, ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಮೌಲ್ಯಮಾಪನ ಸಾಧನಗಳನ್ನು ಬಳಸಲಾಗುತ್ತಿದ್ದರೂ, ಅವುಗಳನ್ನು ಪಠ್ಯಕ್ರಮವೆಂದು ಪರಿಗಣಿಸಲು ಸಾಧ್ಯವಿಲ್ಲ. ಮೌಲ್ಯಮಾಪನವು ಪಠ್ಯಕ್ರಮದ ಒಂದು ಭಾಗ ಮಾತ್ರ ಎಂದು ವಿವರಿಸಿದರು.

NIEPID ದಿಶಾ ಪಠ್ಯಕ್ರಮವು ವಿಶೇಷಚೇತನ ಮಕ್ಕಳ ಶಿಕ್ಷಣದಲ್ಲಿ ಏಕರೂಪತೆಯನ್ನು ತರಲು ರೂಪಿಸಲಾದ ಸಮಗ್ರ ಪಠ್ಯಕ್ರಮವಾಗಿದೆ. ಇದರಲ್ಲಿ ಮೌಲ್ಯಮಾಪನ, ಬೋಧನಾ ವಿಧಾನಗಳು, ಬೋಧನಾ ಪ್ರಕ್ರಿಯೆ, ಕಲಿಕಾ ಸಾಮಗ್ರಿಗಳು ಹಾಗೂ ಮೌಲ್ಯಮಾಪನ ವಿಧಾನ ಸೇರಿದಂತೆ ಹಲವು ಅಂಶಗಳು ಒಳಗೊಂಡಿವೆ. ಈ ಮೂರು ದಿನಗಳ ತರಬೇತಿಯಲ್ಲಿ ದಿಶಾ ಪಠ್ಯಕ್ರಮವನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬುದರ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಿಕಂದರಾಬಾದ್‌ನ NIEPID ಸಂಸ್ಥೆಯ ಹಿರಿಯ ವಿಶೇಷ ಶಿಕ್ಷಣ ತಜ್ಞ ಪುಷ್ಪವಿಂದರ್ ಸಿಂಗ್ ಸೈನಿ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದರು.

ಸಾನಿಧ್ಯ ಭಿನ್ನ ಸಾಮರ್ಥ್ಯ ವಸತಿ ಶಾಲೆಯ ಆಡಳಿತಾಧಿಕಾರಿ ಡಾ. ವಸಂತ ಕುಮಾರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಸೋಫಿಯಾ ಡಿಸೋಜ ಧನ್ಯವಾದ ಸಮರ್ಪಿಸಿದರು. ಸುಮಾ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.

ವಿಶೇಷ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಸಿಬ್ಬಂದಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!