ಮಕ್ಕಳ ಕ್ಯಾನ್ಸರ್ ಕುರಿತು ‘ಶೌರ್ಯ’ ಮಾಹಿತಿ ಶಿಬಿರ ಸೆ.10ರಂದು

ಮಂಗಳೂರು:ಅಂತರಾಷ್ಟ್ರೀಯ ಲಯನ್ಸ್ ಜಿಲ್ಲೆ 317ಡಿ ಹಾಗೂ ತಪಸ್ಯ ಫೌಂಡೇಶನ್‌ ವತಿಯಿಂದ ವಿವಿಧ ವೈದ್ಯಕೀಯ ಸಂಸ್ಥೆಗಳ ಸಹಯೋಗದಲ್ಲಿ ಮಕ್ಕಳ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ‘ಶೌರ್ಯ’ ಮಾಹಿತಿ ಶಿಬಿರವನ್ನು ಸೆಪ್ಟೆಂಬರ್ 10ರಂದು ಮಂಗಳೂರಿನ ಟೌನ್‌ಹಾಲ್‌ನಲ್ಲಿ ಆಯೋಜಿಸಲಾಗಿದೆ ಎಂದು ತಪಸ್ಯ ಫೌಂಡೇಶನ್‌ನ ವ್ಯವಸ್ಥಾಪನಾ ಟ್ರಸ್ಟಿ ಹಾಗೂ ಲಯನ್ಸ್ ಜಿಲ್ಲೆ 317ಡಿ ಮುಖ್ಯ ಸಂಯೋಜಕಿ ಲಯನ್ ಸಬಿತಾ ರಾಮನಾಥ್ ಶೆಟ್ಟಿ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಆರಂಭಿಕ ಹಂತದಲ್ಲೇ ರೋಗವನ್ನು ಪತ್ತೆಹಚ್ಚುವ ಮಹತ್ವವನ್ನು ತಿಳಿಸುವುದು ಹಾಗೂ ಕ್ಯಾನ್ಸರ್ ಪೀಡಿತ ಬಡ ಮಕ್ಕಳಿಗೆ ನೆರವು ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಲಯನ್ಸ್ ಜಿಲ್ಲೆ 317ಡಿ ಜಿಲ್ಲಾ ರಾಜ್ಯಪಾಲ ಲಯನ್ ಎಚ್.ಎಂ. ತಾರನಾಥ್, ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ, ಕನಚೂರ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಸ್ಥಾಪಕ ಅಧ್ಯಕ್ಷ ಡಾ. ಹಾಜಿ ಯು.ಕೆ. ಮೋನು ಹಾಗೂ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ತಪಸ್ಯ ಫೌಂಡೇಶನ್‌ನ ವ್ಯವಸ್ಥಾಪನಾ ಟ್ರಸ್ಟಿ ಹಾಗೂ ಲಯನ್ಸ್ ಜಿಲ್ಲೆ 317ಡಿ ಮುಖ್ಯ ಸಂಯೋಜಕಿ ಲಯನ್ ಸಬಿತಾ ರಾಮನಾಥ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಲಯನ್ಸ್ ಜಿಲ್ಲೆ 317ಡಿ ನಿಕಟಪೂರ್ವ ರಾಜ್ಯಪಾಲ ಉಡುಪಿ ಅರವಿಂದ್ ಶೆಣೈ, ಪ್ರಥಮ ಉಪರಾಜ್ಯಪಾಲ ಗೋವರ್ಧನ್ ಕೆ. ಶೆಟ್ಟಿ, ದ್ವಿತೀಯ ಉಪರಾಜ್ಯಪಾಲ ವೆಂಕಟೇಶ್ ಹೆಬ್ಬಾರ್, ಮಾಜಿ ಮಲ್ಟಿಪಲ್ ಕೌನ್ಸಿಲ್ ಅಧ್ಯಕ್ಷ ವಸಂತ್ ಕುಮಾರ್ ಶೆಟ್ಟಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಜಿಲ್ಲಾ ಸಂಪುಟ ಖಜಾಂಜಿ ಸನ್ನಿ, ಜಿಲ್ಲಾ ಸಂಪುಟ ಸಂಯೋಜಕ ಲೋಕೇಶ್ ಶೆಟ್ಟಿ, ಜಿಲ್ಲಾ ರಾಜ್ಯಪಾಲರ ಸಂಯೋಜಕ ಸಿಜ್ಜು ಹಾಗೂ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೋಕೇಶ್ ಉಲ್ಲಾಳ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದಲ್ಲಿ ಡಾ. ಹರ್ಷ ಪ್ರಸಾದ್ ಎಲ್., ಡಾ. ಚಂದನ ಪೈ ಹಾಗೂ ಡಾ. ಅನುಷಾ ಹೆಗಡೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಕ್ಕಳ ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ. ಡಾ. ಕೃಷ್ಣಶರಣ್, ಡಾ. ಅಂಜುಂ ಇಫ್ತಿಕಾರ್ ಹಾಗೂ ಡಾ. ಅಶ್ವಿನಿ ಶೆಟ್ಟಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಡ ಮಕ್ಕಳಿಗೆ ಧನಸಹಾಯ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಜೀ ಕನ್ನಡ ವಾಹಿನಿಯ ‘ಸರಿಗಮಪ ಲಿಟಲ್ ಚಾಂಪ್ಸ್ 2026’ರ ಮಾಸ್ಟರ್ ಅಸ್ಮಿತ್ ಅವರಿಂದ ವಿಶೇಷ ಗಾಯನ ಕಾರ್ಯಕ್ರಮ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ನಂದಗೋಕುಲ ತಂಡದಿಂದ ವೈಶಿಷ್ಟ್ಯಪೂರ್ಣ ನೃತ್ಯ ಕಾರ್ಯಕ್ರಮ ನಡೆಯಲಿದೆ.ಇದೇ ವೇಳೆ ಜುಲೇಖಾ ಏನೋಪಯ ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ ವತಿಯಿಂದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಲಯನ್ಸ್ ಜಿಲ್ಲೆ 317ಡಿ ಪ್ರಥಮ ಉಪರಾಜ್ಯಪಾಲ ಗೋವರ್ಧನ್ ಕೆ. ಶೆಟ್ಟಿ, ಸಂಘದ ಪ್ರಮುಖರಾದ ವಿಜಯ ವಿಷ್ಣು ಮಯ್ಯ, ಪ್ರಶಾಂತ್ ಶೆಟ್ಟಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

SHARE
Loading spinner

One thought on “ಮಕ್ಕಳ ಕ್ಯಾನ್ಸರ್ ಕುರಿತು ‘ಶೌರ್ಯ’ ಮಾಹಿತಿ ಶಿಬಿರ ಸೆ.10ರಂದು

Leave a Reply

Your email address will not be published. Required fields are marked *

error: Content is protected !!