ಮಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಮಕ್ಕಳ ಆರೋಗ್ಯ ಹಾಗೂ ನೈರ್ಮಲ್ಯ ದೃಷ್ಟಿಯಿಂದ ದುರಾವಸ್ಥೆಯಲ್ಲಿರುವ ಶೌಚಾಲಯಗಳನ್ನು ಸ್ವಚ್ಛಗೊಳಿಸಿ, ದುರಸ್ತಿ ಹಾಗೂ ನವೀಕರಣಗೊಳಿಸುವ ಉದ್ದೇಶದಿಂದ ರಾಜಕೇಸರಿ ಸೇವಾ ಟ್ರಸ್ಟ್ (ರಿ.), ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ‘ರಾಜಕೇಸರಿ ಸ್ವಚ್ಛಾಲಯ ಅಭಿಯಾನ’ ಕಳೆದ ಕೆಲವು ವರ್ಷಗಳಿಂದ ಹಮ್ಮಿಕೊಂಡು ಬರುತ್ತಿದೆ .

ಶಾಲಾ ಪರಿಸರ ಸ್ವಚ್ಛಗೊಳಿಸುವುದಕ್ಕೆ ಮಾತ್ರ ಸೀಮಿತವಾಗದೆ, ಸರ್ಕಾರಿ ಶಾಲೆಗಳಲ್ಲಿನ ನಿರ್ಲಕ್ಷ್ಯಕ್ಕೊಳಗಾಗಿರುವ ಶೌಚಾಲಯಗಳ ಸ್ಥಿತಿಗತಿಯನ್ನು ಸುಧಾರಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಶೌಚಾಲಯಗಳನ್ನು ಸ್ವಯಂಸೇವಕರ ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ, ಅಗತ್ಯ ದುರಸ್ತಿ ಕೈಗೊಂಡು, ಬಣ್ಣ ಬಳಿದು ಸುಸಜ್ಜಿತ ‘ಸ್ವಚ್ಛಾಲಯ’ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಬಾಲಕಿಯರ ಆರೋಗ್ಯ, ನೈರ್ಮಲ್ಯ ಹಾಗೂ ಗೌಪ್ಯತೆಯ ಹಿತದೃಷ್ಟಿಯಿಂದಲೂ ಈ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.
ಅಭಿಯಾನದ ಮೊದಲ ಹಂತದಲ್ಲಿ ಸಹೃದಯಿ ಸಂಘ-ಸಂಸ್ಥೆಗಳು ಹಾಗೂ ದಾನಿಗಳ ಸಹಕಾರದಿಂದ ಸುಮಾರು ₹3 ಲಕ್ಷ ವೆಚ್ಚದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 18 ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ನವೀಕರಿಸಲಾಗಿದೆ. ಇದೀಗ ಎರಡನೇ ಹಂತದಲ್ಲಿ ಆದ್ಯತೆ ಮೇರೆಗೆ 15 ಶಾಲೆಗಳನ್ನು ಗುರುತಿಸಲಾಗಿದ್ದು, ಹಂತ ಹಂತವಾಗಿ ಶೌಚಾಲಯಗಳ ನವೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ.

ಇದರ ಭಾಗವಾಗಿ ಸೆ.20ರಂದು ಬಂಟ್ವಾಳ ಘಟಕದ ನೇತೃತ್ವದಲ್ಲಿ ಕೊಡಂಗೆಯ ನೇತಾಜಿ ಸುಭಾಷ್ ಚಂದ್ರ ಬೋಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 19ನೇ ಶಾಲೆಯ ಶೌಚಾಲಯ ನವೀಕರಣ ಕಾರ್ಯ ನಡೆಯಲಿದೆ. ಟ್ರಸ್ಟ್‌ನ ಸ್ವಯಂಸೇವಕರು ಶ್ರಮದಾನದ ಮೂಲಕ ಶೌಚಾಲಯವನ್ನು ಸ್ವಚ್ಛಗೊಳಿಸಿ, ಅಗತ್ಯ ದುರಸ್ತಿ ಹಾಗೂ ಬಣ್ಣದ ಕೆಲಸಗಳನ್ನು ಕೈಗೊಂಡು ಸುಸಜ್ಜಿತಗೊಳಿಸಲಿದ್ದಾರೆ.
ಬಾಲ್ಯದಲ್ಲಿಯೇ ಮಕ್ಕಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಹಾಗೂ ಆರೋಗ್ಯಕರ ಶೌಚಾಲಯ ವ್ಯವಸ್ಥೆ ಕಲ್ಪಿಸುವ ಮೂಲಕ ಬಡ ಮಕ್ಕಳ ಮುಖದಲ್ಲಿ ನಗು ಮೂಡಿಸುವುದು ‘ರಾಜಕೇಸರಿ ಸ್ವಚ್ಛಾಲಯ ಅಭಿಯಾನ’ದ ಆಶಯವಾಗಿದೆ.

