ಉಡುಪಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಚಿನ್ನಯ್ಯ ತನ್ನ ದೂರನ್ನು ಯಾಕೆ ವಾಪಾಸ್ಸು ಪಡೆದುಕೊಂಡರು ಮತ್ತು ಅದರಿಂದ ಯಾಕೆ ಹಿಂದಕ್ಕೆ ಸರಿದರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಅದರ ಹಿಂದಿನ ಕೈಗಳು ಬಯಲು ಆಗುತ್ತದೆ. ಈ ಇಡೀ ಪ್ರಕರಣವನ್ನು ಬುರುಡೆ, ಅಸ್ಥಿಪಂಜರಕ್ಕೆ ಮಾತ್ರ ಸ್ಥೀಮಿತ ಗೊಳಿಸದೆ ಭೂಮಿ, ಮೈಕ್ರೋ ಫೈನಾನ್ಸ್ ದೌರ್ಜನ್ಯ, ಜಮೀನ್ದಾರಿ ಅದೃಷ್ಟ ಸರಕಾರದ ದೌರ್ಜನ್ಯದ ಹಿನ್ನೆಲೆಯಲ್ಲಿ ನೋಡಬೇಕಾಗಿದೆ ಎಂದು ಪತ್ರಕರ್ತ ನವೀನ್ ಸೂರಿಂಜೆ ಹೇಳಿದ್ದಾರೆ.
ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ಸೌಜನ್ಯ ನ್ಯಾಯ ಸಪ್ತಾಹದ ಪ್ರಯುಕ್ತ ಅಜ್ಜರಕಾಡು ವಿಮಾ ನೌಕರರ ಸಭಾಭವನದಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮಾರು 300-400 ಪ್ರಕರಣಗಳು ಅಸಹಜ ಸಾವು ಎಂಬುದಾಗಿ ದಾಖಲಾ ಗಿವೆ. ಅದರ ಬಗ್ಗೆ ತನಿಖೆ ಮಾಡ ಬೇಕು. ಅವರು ಯಾಕೆ ಸತ್ತರು, ಅವರ ಸಾವಿನ ವೈದ್ಯಕೀಯ ಕಾರಣ, ಮೃತದೇಹವನ್ನು ಸುಡಲು ಯಾರು ಹೇಳಿದರು, ಸುಡುವಾಗ ಕಾನೂನು ಪಾಲನೆ ಮಾಡಿದ್ದಾರೆಯೇ? ಮಾಡದಿದ್ದರೆ ಯಾರ ರಕ್ಷಣೆಗೊಸ್ಕರ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಎಸ್‌ಐಟಿಯನ್ನು ಕಳೆದ 20 ವರ್ಷಗಳಿಂದ ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಸಹಜ ಸಾವಿನ ತನಿಖಕೆಗಾಗಿ ರಚನೆ ಮಾಡಿರುವುದೇ ಹೊರತು ಚಿನ್ನಯ್ಯನ ಬುರುಡೆ, ಅಸ್ಥಿಪಂಜರ ಹುಡುಕಾಟಕ್ಕೆ ಅಲ್ಲ. ಅದನ್ನು ಎಸ್‌ಐಟಿ ಪಾಲಿಸಬೇಕು. 2005ರಿಂದ 2025ರವರೆಗೆ ದಾಖಲಾಗಿರುವ ಎಲ್ಲ ಅಸಹಜ ಸಾವಿನ ತನಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಮಾತನಾಡಿದರು.ವೇದಿಕೆಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸೌಹಾರ್ದ ಕರ್ನಾಟಕ ಜಿಲ್ಲಾ ಸಂಚಾಲಕ ಚಂದ್ರಶೇಖರ್ ಉಪಸ್ಥಿತರಿದ್ದರು.