ವಿಜಯ – ದಶಮಿ ಕರೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಪ್ರಥಮ ಕಂಬಳ ಉತ್ಸವ ….. !

ಮಂಗಳೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಕಂಬಳ ಆಯೋಜಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಅಕ್ಟೋಬರ್ 18 ಮತ್ತು 19ರಂದು ಸುಮಾರು 20 ಎಕರೆ ಪ್ರದೇಶದಲ್ಲಿ ಅದ್ಧೂರಿಯಾಗಿ ಕಂಬಳ ನಡೆಯಲಿದೆ ಎಂದು ಪುತ್ತೂರು ಶಾಸಕ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒಲವಿನ ಮೇರೆಗೆ ದಸರಾ ಉತ್ಸವದಲ್ಲಿ ಕಂಬಳ ಆಯೋಜಿಸಲಾಗುತ್ತಿದೆ. ಮೈಸೂರಿನಲ್ಲಿ ಈಗಾಗಲೇ ಕಂಬಳದ ಕರೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿದ್ದು, ಒಂದೇ ಸಮಯದಲ್ಲಿ ಸುಮಾರು 15 ಸಾವಿರ ಮಂದಿ ವೀಕ್ಷಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಕಂಬಳಕ್ಕೆ 150ರಿಂದ 160 ಜೋಡಿ ಆಯ್ದ ಕೋಣಗಳನ್ನು ಕರೆತರಲು ಉದ್ದೇಶಿಸಲಾಗಿದೆ. ಕೋಣಗಳ ಮಾಲೀಕರ ನೋಂದಣಿ, ವಸತಿ, ಆಹಾರ, ಕೋಣಗಳನ್ನು ಕಟ್ಟುವ ಸ್ಥಳ, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಕಲ್ಪಿಸಲಾಗುವುದು. ಅಕ್ಟೋಬರ್ 15ರಂದು ಐದು ಜೋಡಿ ಕೋಣಗಳೊಂದಿಗೆ ಪ್ರಾಯೋಗಿಕ ಓಟ ನಡೆಸಿ ಕಂಬಳದ ಕರೆ ಹಾಗೂ ಇತರ ವ್ಯವಸ್ಥೆಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಅಕ್ಟೋಬರ್ 16ರಂದು ಬೆಳಿಗ್ಗೆ 10.30ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕೋಣಗಳು ಮೈಸೂರಿನತ್ತ ಪ್ರಯಾಣಿಸಲಿದ್ದು, ಮಾರ್ಗಮಧ್ಯೆ ಮಡಿಕೇರಿಯಲ್ಲಿ ವಿಶ್ರಾಂತಿ ನೀಡಲಾಗುತ್ತದೆ. ಅಕ್ಟೋಬರ್ 17ರಂದು ಕೋಣಗಳಿಗೆ ಸಂಪೂರ್ಣ ವಿಶ್ರಾಂತಿ ನೀಡಿ, 18ರಂದು ಬೆಳಿಗ್ಗೆ ಕಂಬಳಕ್ಕೆ ಚಾಲನೆ ನೀಡಲಾಗುತ್ತದೆ. 19ರಂದು ಬಹುಮಾನ ವಿತರಣೆ ನಡೆಯಲಿದೆ ಎಂದು ಅಶೋಕ್ ರೈ ಹೇಳಿದರು.

ದೊಡ್ಡ ಜೋಡಿ ಕೋಣಗಳಿಗೆ ₹65 ಸಾವಿರ ಹಾಗೂ ಚಿಕ್ಕ ಜೋಡಿ ಕೋಣಗಳಿಗೆ ₹50 ಸಾವಿರ ಬಹುಮಾನ ನೀಡಲು ಸರ್ಕಾರ ನಿಗದಿಪಡಿಸಿದೆ. ಕೋಣಗಳ ಮಾಲೀಕರು ಬಹುಮಾನ ಮೊತ್ತ ಹೆಚ್ಚಿಸುವಂತೆ ಮನವಿ ಮಾಡಿದ್ದು, ಈ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಾಲೀಕರಿಗೆ ಪದಕ, ಪ್ರಮಾಣಪತ್ರ, ಸ್ಮರಣಿಕೆ, ಪೇಟ ಹಾಗೂ ಶಾಲು ನೀಡಿ ಗೌರವಿಸಲಾಗುವುದು ಎಂದರು.

ಕಂಬಳ ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಪಾಸ್ ವ್ಯವಸ್ಥೆಯೊಂದಿಗೆ ಸಾಮಾನ್ಯ ಜನರಿಗೂ ಮುಕ್ತ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಸುಮಾರು ಐದು ಸಾವಿರ ಮಂದಿ ನಿಂತು ವೀಕ್ಷಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ. ವಿಐಪಿ ಹಾಗೂ ವಿವಿಐಪಿಗಳಿಗೆ ಗ್ಯಾಲರಿಯಲ್ಲಿ ಆಸನ ವ್ಯವಸ್ಥೆ ಇರಲಿದೆ ಎಂದು ಹೇಳಿದರು.

ದಕ್ಷಿಣ ಕನ್ನಡದ ಕರಾವಳಿ ಆಹಾರ ಸಂಸ್ಕೃತಿಯನ್ನು ಮೈಸೂರಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ನಾಲ್ಕರಿಂದ ಐದು ಎಕರೆ ಪ್ರದೇಶದಲ್ಲಿ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗುವುದು. ಕೋಣಗಳನ್ನು ಇರಿಸುವ ಪ್ರದೇಶದಲ್ಲೂ ಸಾರ್ವಜನಿಕರಿಗೆ ವೀಕ್ಷಣೆ ಹಾಗೂ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಉತ್ತಮ ದಾಖಲೆ ಹಾಗೂ ಪ್ರದರ್ಶನ ಹೊಂದಿರುವ ಕೋಣಗಳಿಗೆ ಆದ್ಯತೆ ನೀಡಿ ಆಯ್ಕೆ ಮಾಡಲಾಗುವುದು ಎಂದು ಅಶೋಕ್ ರೈ ತಿಳಿಸಿದರು.

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜಿಸಲು ಅವಕಾಶ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಂಬಳ ಸಮಿತಿ ಪರವಾಗಿ ಅಭಿನಂದನೆ ಸಲ್ಲಿಸಿದರು. ಕಂಬಳವು ತುಳುನಾಡಿನ ವೀರಕ್ರೀಡೆ ಮಾತ್ರವಲ್ಲದೆ ರೈತಾಪಿ ವರ್ಗದ ಜಾನಪದ ಕ್ರೀಡೆಯೂ ಆಗಿದ್ದು, ಮೈಸೂರಿನಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ಹಾಗೂ ರಾಜ್ಯದ ಜನ ಮೆಚ್ಚುವ ರೀತಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದರು.

ಬೆಂಗಳೂರಿನಲ್ಲಿ ನಡೆದ ಕಂಬಳಕ್ಕೆ ದೊರೆತ ಅಂತರರಾಷ್ಟ್ರೀಯ ಮಟ್ಟದ ಮನ್ನಣೆಯ ಹಿನ್ನೆಲೆಯಲ್ಲಿ ಮೈಸೂರು ಕಂಬಳವನ್ನೂ ಅದ್ಧೂರಿಯಾಗಿ ಆಯೋಜಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಂಬಳದ ಮೂಲಕ ತುಳುನಾಡು ಮತ್ತು ಕರುನಾಡಿನ ಸಾಂಸ್ಕೃತಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ದಸರಾ ಎಂಬ ನಾಡಹಬ್ಬದ ಅಂಗವಾಗಿ ನಡೆಯಲಿರುವ ಮೈಸೂರು ಕಂಬಳ ಐತಿಹಾಸಿಕವಾಗಿ ದಾಖಲಾಗುವಂತೆ ಎಲ್ಲರೂ ಸಹಕರಿಸಬೇಕು ಎಂದು ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಪಧಾಧಿಕಾರಿಗಳು ಉಪಸ್ಥಿರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!