ನ್ಯಾಯಾಲಯ ಜಾಮೀನು ನೀಡಿದ ಬೆನ್ನಲ್ಲೇ ಗೂಂಡಾ ಕಾಯ್ದೆ ಅಸ್ತ್ರ: ಕಾನೂನಿನ ದುರ್ಬಳಕೆ ಹಾಗೂ ದಮನ ನೀತಿಯ ವಿರುದ್ಧ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ; ನಾಳೆ ಬಿ.ಸಿ. ರೋಡ್ ಚಲೋ ಬೃಹತ್ ಪ್ರತಿಭಟನೆಗೆ ಬೆಂಬಲ

ಮಂಗಳೂರು: ಬಂಟ್ವಾಳದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯವು ಭರತ್ ಕುಮ್ಡೇಲ್ ಸೇರಿದಂತೆ ಎಂಟು ಮಂದಿಗೆ ಕಾನೂನುಬದ್ಧವಾಗಿ ಜಾಮೀನು ಮಂಜೂರು ಮಾಡಿದ ಕೆಲವೇ ಗಂಟೆಗಳಲ್ಲಿ, ನ್ಯಾಯಾಲಯದ ಆದೇಶಕ್ಕೆ ಕಿಂಚಿತ್ತೂ ಗೌರವ ನೀಡದೆ ಆರು ಮಂದಿಯ ಮೇಲೆ ತರಾತುರಿಯಲ್ಲಿ ಗೂಂಡಾ ಕಾಯ್ದೆ ಜಾರಿಗೊಳಿಸಿ ಮತ್ತೆ ಸೆರೆಮನೆಗೆ ಅಟ್ಟಿರುವುದು ಸರ್ಕಾರದ ದ್ವೇಷಪೂರಿತ ಆಡಳಿತಕ್ಕೆ ಸ್ಪಷ್ಟ ಸಾಕ್ಷಿ ಎಂದು ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನ್ಯಾಯಾಂಗದ ತೀರ್ಪಿಗೆ ಅಗೌರವ:

ಪ್ರಜಾಪ್ರಭುತ್ವದ ಆಧಾರಸ್ತಂಭವಾದ ನ್ಯಾಯಾಂಗ ವ್ಯವಸ್ಥೆಯು ಸತ್ಯಾಸತ್ಯತೆಗಳನ್ನು ಪರಿಶೀಲಿಸಿ ಜಾಮೀನು ಮಂಜೂರು ಮಾಡಿದಾಗ, ಅದನ್ನು ಗೌರವಿಸುವುದು ನಾಗರಿಕ ಸರ್ಕಾರದ ಕರ್ತವ್ಯ. ಆದರೆ ಜಾಮೀನು ದೊರೆತ ತಕ್ಷಣವೇ ಪೊಲೀಸ್ ಇಲಾಖೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು, ಕಾನೂನಿನ ನಿಯಮಗಳನ್ನು ದುರುಪಯೋಗಪಡಿಸಿಕೊಂಡು ಭರತ್ ಕುಮ್ಡೇಲ್, ಶಿವಪ್ರಸಾದ್, ಪ್ರದೀಪ್, ರಂಜಿತ್, ಅಭಿನ್ ಹಾಗೂ ತೇಜಕ್ಷ ಅವರ ವಿರುದ್ಧ ಗೂಂಡಾ ಕಾಯ್ದೆ ಜಡಿದಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ಇದು ವ್ಯವಸ್ಥಿತವಾಗಿ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕಲು ನಡೆಸುತ್ತಿರುವ ಸಂಚು ಎಂದು ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ ಹೊರಹಾಕಿದ್ದಾರೆ.

ನಾಳೆ ಸೆ. 28ರ ಬಿ.ಸಿ. ರೋಡ್ ಚಲೋಗೆ ಸಂಪೂರ್ಣ ಬೆಂಬಲ:

ಸರ್ಕಾರದ ಈ ದೌರ್ಜನ್ಯ ಮತ್ತು ಕಾನೂನು ದುರ್ಬಳಕೆಯ ವಿರುದ್ಧ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಸೆಪ್ಟೆಂಬರ್ 28ರ ಸೋಮವಾರ ಬೆಳಗ್ಗೆ 9:00 ಗಂಟೆಗೆ ಬಂಟ್ವಾಳದ ಬಿ.ಸಿ. ರೋಡ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಬಿ.ಸಿ. ರೋಡ್ ಚಲೋ ಬೃಹತ್ ಪ್ರತಿಭಟನಾ ಸಭೆಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನ್ಯಾಯಕ್ಕಾಗಿ ನಡೆಯುವ ಈ ಹೋರಾಟದಲ್ಲಿ ಜಿಲ್ಲೆಯ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ, ಕಾರ್ಯಕರ್ತರೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ಜನವಿರೋಧಿ ಧೋರಣೆಗೆ ತಕ್ಕ ಎಚ್ಚರಿಕೆ ನೀಡಬೇಕು ಎಂದು ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಕರೆ ನೀಡಿದ್ದಾರೆ.

ಪ್ರಕಟಣೆಗಾಗಿ:
ಆದಿತ್ಯ ನಾರಾಯಣ ಪಿ.
ಮಾಧ್ಯಮ ಕಾರ್ಯದರ್ಶಿಗಳು,
ವಿಧಾನ ಪರಿಷತ್ ಸದಸ್ಯರ ಕಚೇರಿ,
(ಕಿಶೋರ್ ಕುಮಾರ್ ಪುತ್ತೂರು)

SHARE
Loading spinner

Leave a Reply

Your email address will not be published. Required fields are marked *

error: Content is protected !!