ಪುತ್ತೂರು: ರಾಜ್ಯದ ವಿವಿಧೋದ್ದೇಶ ಹಾಗೂ ಗ್ರಾಮೀಣ-ನಗರ ಪುನರ್ವಸತಿ ಕಾರ್ಯಕರ್ತರ ಕನಿಷ್ಠ ವೇತನದ ಬೇಡಿಕೆಗೆ ಸಂಬಂಧಿಸಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಸಲ್ಲಿಸಲಾಯಿತು.

ಆಗಸ್ಟ್ 10ರಂದು ಪುತ್ತೂರು ಶಾಸಕರ ಕಚೇರಿಯಲ್ಲಿ ತಾಲೂಕಿನ MRW, VRW ಹಾಗೂ URW ಕಾರ್ಯಕರ್ತರು ಶಾಸಕರನ್ನು ಭೇಟಿ ಮಾಡಿ, ಕಾರ್ಮಿಕ ಇಲಾಖೆಯಿಂದ ಅನುಮೋದನೆಗೊಂಡು ಸದ್ಯ ಆರ್ಥಿಕ ಇಲಾಖೆಯಲ್ಲಿ ಬಾಕಿ ಉಳಿದಿರುವ ಪುನರ್ವಸತಿ ಕಾರ್ಯಕರ್ತರ ಕನಿಷ್ಠ ವೇತನದ ಕಡತದ ಕುರಿತು ಚರ್ಚಿಸಿದರು.

ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ರಾಜ್ಯದ ಪುನರ್ವಸತಿ ಕಾರ್ಯಕರ್ತರ ಪರವಾಗಿ ಧ್ವನಿಯೆತ್ತಿ ನ್ಯಾಯ ಒದಗಿಸುವಂತೆ ಕಾರ್ಯಕರ್ತರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಮುಂಬರುವ ಅಧಿವೇಶನದಲ್ಲಿ ರಾಜ್ಯದ ಪುನರ್ವಸತಿ ಕಾರ್ಯಕರ್ತರ ಪರವಾಗಿ ಧ್ವನಿಯಾಗುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಎಂಡೋಸಲ್ಫಾನ್ ಸಂತ್ರಸ್ತರಿಗೆ ನೀಡಲಾಗುತ್ತಿರುವ ಮಾಸಿಕ ಪಿಂಚಣಿಯನ್ನು ಹೆಚ್ಚಿಸುವ ಕುರಿತು ಸದನದಲ್ಲಿ ಪ್ರಸ್ತಾಪಿಸುವಂತೆಯೂ ಶಾಸಕರಿಗೆ ಮನವಿ ಮಾಡಲಾಯಿತು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಪುತ್ತೂರು ತಾಲೂಕಿನ MRW, VRW ಹಾಗೂ URW ಪುನರ್ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.

