ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್ ಗೆ‌ ‘ಸಾಧಕ ರತ್ನ ‘ ಪ್ರಶಸ್ತಿ ಪ್ರದಾನ

ಮಂಗಳೂರು: ಕ್ರೀಡಾ ಪತ್ರಿಕೋದ್ಯಮದಲ್ಲಿ ಕಳೆದ ಮೂರು ದಶಕಗಳಿಂದ ಗುರುತಿಸಿಕೊಂಡಿರುವ ಕ್ರೀಡಾ ಅಂಕಣಕಾರ ಎಸ್. ಜಗದೀಶ್ಚಂದ್ರ ಅಂಚನ್  ಸೂಟರ್‌ಪೇಟೆ  ಅವರಿಗೆ ‘ಸಾಧಕ ರತ್ನ’ ಪ್ರಶಸ್ತಿಯನ್ನು ಕೇರಳ ಸರಕಾರದ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವರಾದ ವಿ.ಇ.ಅಬ್ದುಲ್ ಗಫೂರು ಅವರು ಭಾನುವಾರ ಪ್ರದಾನ ಮಾಡಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ಪರಿಷತ್ ಕೇರಳ ಗಡಿನಾಡ ಘಟಕದ ಜಂಟಿ ಆಶ್ರಯದಲ್ಲಿ ಕೇರಳದ ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಕೇರಳ–ಕರ್ನಾಟಕ ಜಾನಪದ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರು ಮಂದಿ ಪ್ರಮುಖ ಸಾಧಕರಿಗೆ ‘ಸಾಧಕ ರತ್ನ’ ಪ್ರಶಸ್ತಿ ನೀಡಲಾಗಿದೆ. ಎಸ್.ಜಗದೀಶ್ಚಂದ್ರ ಅಂಚನ್ ಕ್ರೀಡಾ ಬರವಣಿಗೆಯ ಮೂಲಕ ಪತ್ರಿಕೋದ್ಯಮದಲ್ಲಿ ಹಲವು ವರ್ಷಗಳಲ್ಲಿ ವಿವಿಧ ಪತ್ರಿಕೆಗಳಲ್ಲಿ ಬರೆದ 4500ಕ್ಕೂ ಹೆಚ್ಚು ಲೇಖನಗಳ ಗಣನೀಯ ಸೇವೆಯನ್ನು ಗುರುತಿಸಿ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕ್ರೀಡಾ ಬರವಣಿಗೆಯ ಮೂಲಕ ಗುರುತಿಸಿಕೊಂಡಿರುವ ಎಸ್.ಜಗದೀಶ್ಚಂದ್ರ ಅಂಚನ್ ವಿವಿಧ ರಾಜ್ಯ ಹಾಗೂ ಅಂತರ್‌ರಾಜ್ಯ ಮಟ್ಟದ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
2013ರ ಮೀಡಿಯಾ ಅವಾರ್ಡ್, 2014ರ ಸಮಾಜರತ್ನ ರಾಜ್ಯ ಪ್ರಶಸ್ತಿ, 2016ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ, 2018ರ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ, 2019ರ ಜಾನಪದ ಲೋಕ ರಾಜ್ಯ ಪ್ರಶಸ್ತಿ ,ಹಾಗೂ ನಮ್ಮ ಕುಡ್ಲ ಸಾಧಕ ಪ್ರಶಸ್ತಿ,
2020ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ಕೆ.ಎ. ನೆಟ್ಟಕಲ್ಲಪ್ಪ ರಾಜ್ಯ ಪ್ರಶಸ್ತಿ, 2021ರಲ್ಲಿ ಸಿದ್ಧಗಂಗಾಶ್ರೀ ರಾಜ್ಯ ಪ್ರಶಸ್ತಿ, 2022ರಲ್ಲಿ ಕೆ.ಆರ್. ಟ್ಯಾಗೋರ್ ದತ್ತಿ ನಿಧಿ ಪ್ರಶಸ್ತಿ, 2023ರಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪುರಸ್ಕಾರ ಹಾಗೂ ಸಾಧನ ಪ್ರಶಸ್ತಿ, 2024ರಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ, 2026ರಲ್ಲಿ ಜಾನಪದ ರತ್ನ ಪ್ರಶಸ್ತಿ, ಕನ್ನಡ ಪಯಸ್ವಿನಿ ಅವಾರ್ಡ್–2026 ಅಂತರ್‌ರಾಜ್ಯ ಪ್ರಶಸ್ತಿ ಹಾಗೂ ಬಸವಶ್ರೀ–2026 ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳನ್ನು ಅವರು ಪಡೆದಿದ್ದಾರೆ.

ಗಣ್ಯರ ಉಪಸ್ಥಿತಿ : ಸಮಾರಂಭದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಎರ್ನಾಕುಳಂ ಶಾಸಕ ಟಿ.ಜೆ.ವಿನೋದ್, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ಅಧ್ಯಕ್ಷರಾದ ಫ್ರೊ.ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಆಯೋಗದ ಸದಸ್ಯ ಟಿ.ಎಂ.ಶಾಹೀದ್, ಕಸಾಪ ಕೇರಳ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ‌ ಸಮಿತಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ,  ಕಜಾಪ ಕೇರಳ ಘಟಕಾಧ್ಯಕ್ಷ ಡಾ.ಮಲ್ಲಿಕಾರ್ಜುನ ಎಸ್.ನಾಸಿ, ಪ್ರಮುಖರಾದ ಅಬ್ದುಲ್ ರೆಹಮಾನ್, ರವಿ ನಾಯ್ಕಾಪು, ಶಿವರೆಡ್ಡಿ ಖ್ಯಾಡೇದ್, ಪದ್ಮಶ್ರೀ ಪುರಸ್ಕೃತರಾದ ಸತ್ಯನಾರಾಯಣ ಬೆಳೇರಿ, ಲಕ್ಷ್ಮೀ ಮಹೇಶ್ ರಾಜು ಮೊದಲಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!