ಧರ್ಮಸ್ಥಳ ಸೌಜನ್ಯ ಪ್ರಕರಣ: ‘ನ್ಯಾಯದ ನಡಿಗೆ’ಗೆ ಕರೆ; ಎಸ್‌ಐಟಿ ತನಿಖೆ ಕುರಿತು ತಿಮರೋಡಿ, ಮಟ್ಟಣ್ಣನವರ್ ಹೇಳಿಕೆ

ಉಜಿರೆ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಅವರು ಪತ್ರಿಕಾಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.
ಉಜಿರೆಯ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ ಹೋರಾಟಗಾರರು ಭಾಗವಹಿಸಿದ್ದರು.


ಅಕ್ಟೋಬರ್ 10ರಂದು ‘ನ್ಯಾಯದ ನಡಿಗೆ’
ಸೌಜನ್ಯ ಕೊಲೆಯಾಗಿ ಅಕ್ಟೋಬರ್ 10ಕ್ಕೆ 14 ವರ್ಷ ಪೂರ್ಣಗೊಳ್ಳಲಿದೆ. 14 ವರ್ಷಗಳ ಹೋರಾಟದ ಬಳಿಕ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವುದು ಹೋರಾಟಕ್ಕೆ ಸಂದ ದೊಡ್ಡ ಜಯ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಅಕ್ಟೋಬರ್ 10ರಂದು ಉಜಿರೆಯಿಂದ ಬೆಳ್ತಂಗಡಿವರೆಗೆ ‘ನ್ಯಾಯದ ನಡಿಗೆ’ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನ ನ್ಯಾಯವಾದಿಗಳ ತಂಡವೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಎಸ್‌ಐಟಿ ತನಿಖೆಯನ್ನು ಯಾರೇ ನಡೆಸಿದರೂ ನ್ಯಾಯ ಸಿಗುವ ವಿಶ್ವಾಸವಿದೆ. ತನಿಖೆಯಲ್ಲಿ ಯಾವುದೇ ನ್ಯೂನತೆ ಕಂಡುಬಂದರೆ ತಕ್ಷಣ ಸುಪ್ರೀಂ ಕೋರ್ಟ್‌ನ ಗಮನಕ್ಕೆ ತರುವುದಾಗಿ ತಿಮರೋಡಿ ಹೇಳಿದ್ದಾರೆ.


ಸಂತೋಷ್ ರಾವ್ ಅವರಿಗೆ ಈಗಾಗಲೇ ಎರಡು ತನಿಖಾ ಸಂಸ್ಥೆಗಳಿಂದ ಕ್ಲೀನ್‌ಚಿಟ್ ನೀಡಲಾಗಿದೆ ಎಂದು ಹೇಳಿದ ಅವರು, ಹಿಂದಿನ ತನಿಖೆ ನಡೆಸಿದ ತನಿಖಾ ಸಂಸ್ಥೆಗಳು ಹಾಗೂ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿ ಕುರಿತು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ ಎಂದು ತಿಳಿಸಿದ್ದಾರೆ.
ಹೊಸ ತನಿಖೆಯಿಂದ ಪ್ರಕರಣದ ನೈಜ ಆರೋಪಿಗಳು ಹೊರಬರುವ ವಿಶ್ವಾಸವಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಸಾಕ್ಷಿದಾರರಿಗೆ ಯಾವುದೇ ಒತ್ತಡ ಇರಬಾರದು: ಮಟ್ಟಣ್ಣನವರ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, 14 ವರ್ಷಗಳ ಬಳಿಕ ಪ್ರಕರಣದ ಮರುತನಿಖೆಗೆ ಆದೇಶಿಸಿರುವುದು ಮಹತ್ವದ ಬೆಳವಣಿಗೆ ಎಂದು ಹೇಳಿದ್ದಾರೆ.


ಸ್ಥಳೀಯ ಪೊಲೀಸರು, ಸಿಐಡಿ, ಸಿಒಡಿ ಹಾಗೂ ಸಿಬಿಐ ಈ ಹಿಂದೆ ತನಿಖೆ ನಡೆಸಿವೆ. ಇದೀಗ ಹೊಸ ತಂಡ ತನಿಖೆ ನಡೆಸಲಿದೆ. ಹೊಸ ಎಸ್‌ಐಟಿ ಸಾಕ್ಷಿದಾರರಿಗೆ ಯಾವುದೇ ರೀತಿಯ ಬೆದರಿಕೆ ಅಥವಾ ಒತ್ತಡ ನೀಡದೆ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಹಿಂದೆ ತನಿಖೆ ನಡೆಸಿದ ಮಹಿಳಾ ಅಧಿಕಾರಿಯೊಬ್ಬರು ಸಾಕ್ಷಿದಾರರಿಗೆ ಬೆದರಿಕೆ ಹಾಕಿದ್ದರು ಎಂಬ ಆರೋಪವನ್ನೂ ಮಟ್ಟಣ್ಣನವರ್ ಮಾಡಿದ್ದಾರೆ.
ಪ್ರಕರಣವನ್ನು ದಾರಿತಪ್ಪಿಸಲು ಬೇರೆ ಬೇರೆ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ತಮ್ಮ ಬಳಿ ಇರುವ ಎಲ್ಲಾ ಸಾಕ್ಷ್ಯಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಹೊಸ ಸಾಕ್ಷಿದಾರರ ಹೇಳಿಕೆಗಳನ್ನು ಪಡೆದು ತನಿಖೆಯಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.
‘ಬುರುಡೆ ಪ್ರಕರಣ’ದ ಎಸ್‌ಐಟಿ ವರದಿ ಬಿಡುಗಡೆಗೆ ಆಗ್ರಹ
‘ಬುರುಡೆ ಪ್ರಕರಣ’ಕ್ಕೆ ಸಂಬಂಧಿಸಿದ ಎಸ್‌ಐಟಿ ತನಿಖಾ ವರದಿಯನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಗಿರೀಶ್ ಮಟ್ಟಣ್ಣನವರ್ ಆಗ್ರಹಿಸಿದ್ದಾರೆ.ಜನವರಿಯಲ್ಲೇ ಎಸ್‌ಐಟಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ ಎಂದು ಹೇಳಿರುವ ಅವರು, ವರದಿಯನ್ನು ಸಾರ್ವಜನಿಕಗೊಳಿಸುವಂತೆ ಒತ್ತಾಯಿಸಿದ್ದಾರೆ.
‘ಶಶಿಕುಮಾರ್ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ’ ಎಸ್‌ಐಟಿ ತಂಡದ ಬದಲಾವಣೆಗೆ ಆಗ್ರಹಿಸಿರುವ ವಿಚಾರದ ಕುರಿತು ಸ್ಪಷ್ಟನೆ ನೀಡಿದ ಮಟ್ಟಣ್ಣನವರ್, ಶಶಿಕುಮಾರ್ ಅವರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದ್ದಾರೆ.
“ಜನರೇ ಅವರ ಬಗ್ಗೆ ದೂರು ಮತ್ತು ಅಪಸ್ವರ ಎತ್ತಿದ್ದಾರೆ. ನಮಗೆ ಯಾರು ತನಿಖೆ ಮಾಡಿದರೂ ಅಪಸ್ವರವಿಲ್ಲ. ಸಾಮಾನ್ಯ ಪೊಲೀಸ್ ಕಾನ್‌ಸ್ಟೆಬಲ್ ತನಿಖೆ ಮಾಡಿದರೂ ಆಕ್ಷೇಪವಿಲ್ಲ” ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ನಿರ್ದೇಶನದ ಅಡಿಯಲ್ಲಿ ತನಿಖೆ ನಡೆಯುತ್ತಿರುವುದರಿಂದ ಇದಕ್ಕೆ ಮುಖ್ಯಮಂತ್ರಿ ಉತ್ತರದಾಯಿಯಾಗಿದ್ದಾರೆ. ಮುಖ್ಯಮಂತ್ರಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಗಿರೀಶ್ ಮಟ್ಟಣ್ಣನವರ್ ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!