ಮಂಗಳೂರು:ಸೆ29; ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣಕ್ಕೆ ಪ್ರವೇಶಿಸುವ ವಾಹನಗಳಿಗೆ ಇತ್ತೀಚೆಗೆ ಜಾರಿಗೆ ತರಲಾಗಿರುವ ಹೊಸ ಪ್ರವೇಶ ಶುಲ್ಕ ನಿಯಮಗಳಿಂದ ಆಟೋ ಚಾಲಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು SDTU ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಹಾಗೂ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗಳು ಆಕ್ಷೇಪ ವ್ಯಕ್ತಪಡಿಸಿವೆ.

ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಹಾಗೂ ಕರೆತರಲು ತೆರಳುವ ಆಟೋ ಚಾಲಕರಿಗೆ ₹50 ಪ್ರವೇಶ ಶುಲ್ಕ ವಿಧಿಸಿರುವುದು ಅನ್ಯಾಯಕರವಾಗಿದೆ. ಅಲ್ಲದೆ, ಈ ಹಿಂದೆ ಇದ್ದ 10 ನಿಮಿಷಗಳ ಉಚಿತ ಅವಧಿಯನ್ನು 8 ನಿಮಿಷಗಳಿಗೆ ಇಳಿಸಿರುವುದು ಕೂಡ ಆಟೋ ಚಾಲಕರಿಗೆ ಅನಗತ್ಯ ಆರ್ಥಿಕ ಹೊರೆಯಾಗಲಿದೆ.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುವುದು, ಸಾಮಾನುಗಳನ್ನು ನಿರ್ವಹಿಸುವುದು ಹಾಗೂ ಪ್ರಯಾಣಿಕರು ವಾಹನಕ್ಕೆ ಬರುವುದನ್ನು ಕಾಯುವುದು ಸೇರಿದಂತೆ ವಿವಿಧ ಕಾರಣಗಳಿಂದ ಕೆಲವೊಮ್ಮೆ ಕೆಲವೇ ನಿಮಿಷಗಳ ಹೆಚ್ಚುವರಿ ಸಮಯ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಉಚಿತ ಅವಧಿಯನ್ನು ಕಡಿಮೆ ಮಾಡಿ ಶುಲ್ಕ ವಿಧಿಸುವುದು ಈಗಾಗಲೇ ವಿವಿಧ ವೆಚ್ಚಗಳ ಒತ್ತಡದಲ್ಲಿರುವ ಆಟೋ ಚಾಲಕರ ಆದಾಯದ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ.

ಆಟೋ ಚಾಲಕರು ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವ ಪ್ರಮುಖ ವರ್ಗವಾಗಿದ್ದು, ವಿಮಾನ ನಿಲ್ದಾಣಕ್ಕೆ ಬರುವ ಮತ್ತು ಹೋಗುವ ಪ್ರಯಾಣಿಕರಿಗೆ ನಿರಂತರ ಸೇವೆ ನೀಡುತ್ತಿದ್ದಾರೆ. ಇಂತಹ ಚಾಲಕರಿಗೆ ಅನುಕೂಲಕರ ವಾತಾವರಣ ಕಲ್ಪಿಸುವ ಬದಲು ಹೆಚ್ಚುವರಿ ಶುಲ್ಕದ ಹೊರೆ ಹಾಕುವುದು ಸೂಕ್ತವಲ್ಲ.
ಆದ್ದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತವು ಆಟೋಗಳಿಗೆ ವಿಧಿಸಲಾಗುತ್ತಿರುವ ₹50 ಪ್ರವೇಶ ಶುಲ್ಕವನ್ನು ತಕ್ಷಣ ಹಿಂಪಡೆಯಬೇಕು ಹಾಗೂ ಉಚಿತ ಪ್ರವೇಶದ ಅವಧಿಯನ್ನು ಹಿಂದಿನ 10 ನಿಮಿಷಗಳಿಗೆ ಮರುಸ್ಥಾಪಿಸಬೇಕು ಎಂದು SDTU ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಹಾಗೂ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗಳು ಆಗ್ರಹಿಸುತ್ತವೆ.
ಈ ಬೇಡಿಕೆಗೆ ಸೂಕ್ತ ಸ್ಪಂದನೆ ನೀಡದೆ ಹೊಸ ನಿಯಮವನ್ನು ಮುಂದುವರಿಸಿದಲ್ಲಿ, SDTU ಆಟೋ ಚಾಲಕರ ಯೂನಿಯನ್ ವತಿಯಿಂದ ಮಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಆಟೋ ಚಾಲಕರನ್ನು ಒಗ್ಗೂಡಿಸಿ ವಿಮಾನ ನಿಲ್ದಾಣ ಆಡಳಿತದ ವಿರುದ್ಧ ಹಂತ ಹಂತವಾಗಿ ಪ್ರತಿಭಟನಾ ಹೋರಾಟ ನಡೆಸಲಾಗುವುದು ಎಂದು SDTU ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಜಿಲ್ಲಾಧ್ಯಕ್ಷ ಇಲ್ಯಾಸ್ ಬೆಂಗರೆ ಪತ್ರಿಕಾ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

