ಮಂಗಳೂರು:ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜನರ ಪ್ರಮುಖ ಸಮಸ್ಯೆಗಳನ್ನು ಪ್ರಸ್ತಾಪಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಉದ್ದೇಶವಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು, ಕೆಡಿಪಿ ಸಭೆಗೆ ಅಧ್ಯಕ್ಷರನ್ನು ಆಹ್ವಾನಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಸೆ.15ರಂದು ನಡೆದ ಕೆಡಿಪಿ ಸಭೆಗೆ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸದ ಕಾರಣ ಜಿಲ್ಲಾ ಮಟ್ಟದ ಸಭೆಯಲ್ಲಿ ಜನರ ಸಮಸ್ಯೆಗಳನ್ನು ನೇರವಾಗಿ ಮಂಡಿಸುವ ಅವಕಾಶ ತಪ್ಪಿದೆ ಎಂದು ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜಪೆ ವ್ಯಾಪ್ತಿಯ ಹಲವು ಪಿಡಬ್ಲ್ಯುಡಿ ರಸ್ತೆಗಳು ಹದಗೆಟ್ಟಿದ್ದು, ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿವೆ. ರಸ್ತೆ ದುರಸ್ತಿ, ಎಂಎಸ್ಇಝಡ್ಗಾಗಿ ಭೂಮಿ ಕಳೆದುಕೊಂಡ ನಿರ್ವಸಿತ ಕುಟುಂಬಗಳ ಅರ್ಹ ಸದಸ್ಯರಿಗೆ ಉದ್ಯೋಗ, ಎಂಎಸ್ಇಝಡ್ ವ್ಯಾಪ್ತಿಯ ಸುಮಾರು ₹18 ಕೋಟಿ ತೆರಿಗೆ ಬಾಕಿ ವಸೂಲಿ, ಎಂಆರ್ಪಿಎಲ್ಗೆ ಸಂಬಂಧಿಸಿದ ಸುಮಾರು 27 ಎಕರೆ ಭೂಮಿಯನ್ನು ಹಸಿರು ವಲಯಕ್ಕಾಗಿ ಭೂಸ್ವಾಧೀನ ಹಾಗೂ ಕೈಗಾರಿಕೆಗಳಿಂದ ಉಂಟಾಗುತ್ತಿದೆ ಎನ್ನಲಾದ ಮಾಲಿನ್ಯ ಮತ್ತು ಪರಿಸರ ಸಮಸ್ಯೆಗಳನ್ನು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಲು ಉದ್ದೇಶಿಸಲಾಗಿತ್ತು ಎಂದರು.

ನಗರೋತ್ಥಾನ ಯೋಜನೆಯಡಿ 2022-23ನೇ ಸಾಲಿಗೆ ಬಿಡುಗಡೆಯಾಗಬೇಕಿರುವ ಬಾಕಿ ಅನುದಾನ, 16ನೇ ಹಣಕಾಸು ಆಯೋಗ ಹಾಗೂ ರಾಜ್ಯ ಹಣಕಾಸು ಆಯೋಗದಡಿ (ಎಸ್ಎಫ್ಸಿ) ಸ್ಥಳೀಯ ಸಂಸ್ಥೆಗೆ ಬರಬೇಕಿರುವ ಅನುದಾನ ಬಿಡುಗಡೆಯಾಗದಿರುವುದರಿಂದ ಪಟ್ಟಣದ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಾಮಗಾರಿಗಳಿಗೆ ಅಡಚಣೆಯಾಗಿದೆ. ಬಾಕಿ ಅನುದಾನಗಳನ್ನು ತ್ವರಿತವಾಗಿ ಬಿಡುಗಡೆ ಮಾಡಿ, ರಸ್ತೆ, ನೀರು, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕೆಡಿಪಿ ಸಭೆಗೆ ಆಹ್ವಾನ ನೀಡದಿರುವುದು ವೈಯಕ್ತಿಕ ಅಸಮಾಧಾನದ ವಿಚಾರವಲ್ಲ. ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜನರ ನೇರ ಸಮಸ್ಯೆಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳನ್ನು ಜಿಲ್ಲಾ ಮಟ್ಟದ ಸಭೆಯಲ್ಲಿ ಮಂಡಿಸಿ ಪರಿಹಾರ ಕಂಡುಕೊಳ್ಳುವುದು ಉದ್ದೇಶವಾಗಿತ್ತು. ಮುಂದಿನ ದಿನಗಳಲ್ಲಿ ನಡೆಯುವ ಕೆಡಿಪಿ ಸೇರಿದಂತೆ ಜಿಲ್ಲಾ ಮಟ್ಟದ ಅಭಿವೃದ್ಧಿ ಸಭೆಗಳಿಗೆ ಬಜಪೆ ಪಟ್ಟಣ ಪಂಚಾಯತ್ ಅಧ್ಯಕ್ಷರು ಅಥವಾ ಅಧಿಕೃತ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಿ, ಜನರ ಸಮಸ್ಯೆಗಳನ್ನು ನೇರವಾಗಿ ಮಂಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಲೋಕೇಶ್ ಪೂಜಾರಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಜಪೆ ಪಟ್ಟಣ ಪಂಚಾಯತ್ ಸದಸ್ಯರಾದ ಶರ್ಮಿಳಾ ಶೆಟ್ಟಿ, ರಾಜೇಶ್ ಅಮೀನ್, ದಿನೇಶ್ ಶೆಟ್ಟಿ, ಜಯಂತ್ ಪೂಜಾರಿ ಹಾಗೂ ಸುಪ್ರಿತಾ ಶೆಟ್ಟಿ ಉಪಸ್ಥಿತರಿದ್ದರು.

