ಎಂಆರ್‌ಪಿಎಲ್ ಸ್ಫೋಟದ ತೀವ್ರತೆ ಗಂಭೀರ; ಪಾರದರ್ಶಕ ತನಿಖೆಗೆ ಸಿಪಿಎಂ ಆಗ್ರಹ

ಮಂಗಳೂರು: ಎಂಆರ್‌ಪಿಎಲ್‌ನ ಮೂರನೇ ಹಂತದ ಘಟಕದಲ್ಲಿ ಸಂಭವಿಸಿರುವ ಸ್ಫೋಟ ಹಾಗೂ ಹಾನಿಯ ತೀವ್ರತೆ ಕಂಪೆನಿ ಮತ್ತು ಜಿಲ್ಲಾಡಳಿತ ನೀಡುತ್ತಿರುವ ವಿವರಣೆಗಳಿಗಿಂತ ಹಲವು ಪಟ್ಟು ಗಂಭೀರವಾಗಿದೆ ಎಂದು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.


ಕಂಪೆನಿ ಸ್ಫೋಟದ ತೀವ್ರತೆಯನ್ನು ಎಂದಿನಂತೆ ಲಘುವಾಗಿ ಬಿಂಬಿಸಲು ಪ್ರಯತ್ನಿಸುತ್ತಿದೆ. ಎಂಆರ್‌ಪಿಎಲ್‌ನಲ್ಲಿ ಈ ಹಿಂದೆಯೂ ಹಲವು ಅವಘಡಗಳು ಸಂಭವಿಸಿದ್ದು, ಪ್ರಾಣಹಾನಿಯೂ ಉಂಟಾಗಿದೆ. ಪರಿಸರ ಹಾಗೂ ಸುರಕ್ಷತಾ ನಿಯಮಗಳ ಉಲ್ಲಂಘನೆ, ಕಂಪೆನಿಯ ನಿರ್ಲಕ್ಷ್ಯ ಮತ್ತು ದುರಹಂಕಾರದ ನಡೆ, ಕಂಪೆನಿಯ ನಿಯಮ ಉಲ್ಲಂಘನೆಗಳ ಬಗ್ಗೆ ಜಿಲ್ಲಾಡಳಿತದ ಮೃದು ಧೋರಣೆ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನವೇ ಇಂದಿನ ಭೀಕರ ಸ್ಫೋಟಕ್ಕೆ ಕಾರಣವಾಗಿದೆ ಎಂದು ಸಿಪಿಎಂ ಆರೋಪಿಸಿದೆ.


ಸ್ಫೋಟ ಸಂಭವಿಸಿರುವ ಮೂರನೇ ಹಂತದ ಕೋಕ್ ಸಲ್ಫರ್ ಘಟಕವು ನಿಯಮಗಳ ಉಲ್ಲಂಘನೆಗೆ ಕುಖ್ಯಾತವಾಗಿದೆ. ಕಡ್ಡಾಯ ಹಸಿರು ವಲಯವಿಲ್ಲದೆ ಕಾರ್ಯಾಚರಿಸುತ್ತಿರುವ ದೇಶದ ಏಕೈಕ ಬೃಹತ್ ಕೈಗಾರಿಕಾ ಘಟಕ ಇದಾಗಿರಬಹುದು ಎಂದು ಸಿಪಿಎಂ ಹೇಳಿದೆ. 2014ರಲ್ಲಿ ಈ ಘಟಕ ಕಾರ್ಯಾಚರಣೆ ಆರಂಭಿಸಿದ ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಜೋಕಟ್ಟೆ ಹಾಗೂ ಕಳವಾರು ಗ್ರಾಮಗಳು ಘಟಕದಿಂದ ಉಂಟಾಗುತ್ತಿರುವ ಮಾಲಿನ್ಯದಿಂದ ಸಂಕಷ್ಟಕ್ಕೆ ಸಿಲುಕಿದ್ದು, ಹಲವು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿವೆ ಎಂದು ಸಮಿತಿ ಆರೋಪಿಸಿದೆ.


ಈ ಕುರಿತು 2016ರಲ್ಲಿ ಗ್ರಾಮಸ್ಥರ ಹೋರಾಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆರು ಅಂಶಗಳ ಆದೇಶವನ್ನೂ ಕಂಪೆನಿ ಸಮರ್ಪಕವಾಗಿ ಜಾರಿಗೊಳಿಸದೆ ಗ್ರಾಮಸ್ಥರನ್ನು ಸತಾಯಿಸುತ್ತಿದೆ. ಸಂತ್ರಸ್ತ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಜಿಲ್ಲಾಡಳಿತ ಕಂಪೆನಿಯ ಪರವಾಗಿ ಮೃದು ಧೋರಣೆ ಅನುಸರಿಸುತ್ತಾ ಬಂದಿದೆ. ಕಂಪೆನಿಯ ವಿರುದ್ಧದ ದೂರುಗಳನ್ನೂ ನಿರ್ಲಕ್ಷಿಸಲಾಗುತ್ತಿದೆ. ಇವೆಲ್ಲದರ ಪರಿಣಾಮವೇ ಇಂದಿನ ಸ್ಫೋಟದ ರೂಪದಲ್ಲಿ ಹೊರಹೊಮ್ಮಿದೆ ಎಂದು ಸಿಪಿಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.


ಮೂರನೇ ಹಂತದ ಘಟಕದಲ್ಲಿ ಸಂಭವಿಸಿರುವ ಸ್ಫೋಟದ ಕುರಿತು ಪಾರದರ್ಶಕ ಹಾಗೂ ಸಮಗ್ರ ತನಿಖೆ ನಡೆಸಬೇಕು. ಸ್ಫೋಟದಿಂದ ಸಾರ್ವಜನಿಕರ ಮನೆಗಳು ಮತ್ತು ಕಟ್ಟಡಗಳಿಗೆ ಉಂಟಾಗಿರುವ ಹಾನಿಯನ್ನು ಸಮರ್ಪಕವಾಗಿ ಅಂದಾಜಿಸಿ, ಎಂಆರ್‌ಪಿಎಲ್ ಸಂಸ್ಥೆಯಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸಿಪಿಎಂ ಆಗ್ರಹಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!