ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವಂತೆ ಮನವಿಗಳನ್ನು ಸಲ್ಲಿಸಿರುವ ಪ್ರಕರಣಗಳು ಗಮನಕ್ಕೆ ಬಂದಿದ್ದು, ಇದು ಗಂಭೀರ ವಿಚಾರವಾಗಿದೆ. ನಿಗದಿತ ಚುನಾವಣಾ ನಿಯಮಗಳನ್ನು ಉಲ್ಲಂಘಿಸಿ ಮತದಾರರ ಪಟ್ಟಿಯ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ನಡೆದಿವೆಯೇ ಎಂಬುದರ ಕುರಿತು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ತಕ್ಷಣ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಜಿಲ್ಲಾ ಕಾರ್ಯದರ್ಶಿ ಶಫೀಕ್ ಮಲ್ಲೂರು ಆಗ್ರಹಿಸಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಲು ಸಲ್ಲಿಸಲಾಗಿರುವ Form-7 ಅರ್ಜಿಗಳು ನಿಯಮಾನುಸಾರವಾಗಿದೆಯೇ, ಅರ್ಜಿದಾರರ ವಿವರಗಳು ಮತ್ತು ಘೋಷಣೆಗಳು ಸರಿಯಾಗಿವೆಯೇ, ಹೆಸರು ಅಳಿಸಲು ನೀಡಿರುವ ಕಾರಣಗಳಿಗೆ ಪೂರಕವಾದ ದಾಖಲೆಗಳು ಹಾಗೂ ಸಾಕ್ಷ್ಯಗಳಿವೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ಮರಣ ಪ್ರಕರಣಗಳನ್ನು ಹೊರತುಪಡಿಸಿ ಇತರ ಹೆಸರು ಅಳಿಸುವಿಕೆ ಪ್ರಕರಣಗಳಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆಯೇ ಹಾಗೂ ಸಂಬಂಧಪಟ್ಟ ಮತದಾರರಿಗೆ ತಮ್ಮ ಹಕ್ಕು ಮಂಡಿಸಲು ಸೂಕ್ತ ಅವಕಾಶ ನೀಡಲಾಗಿದೆಯೇ ಎಂಬುದನ್ನೂ ತನಿಖೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ಗುಂಪಿನ ಅರ್ಹ ಮತದಾರರನ್ನು ಗುರಿಯಾಗಿಸಿಕೊಂಡು ಸಂಘಟಿತವಾಗಿ ಹೆಸರು ಅಳಿಸುವ ಪ್ರಯತ್ನ ನಡೆದಿದೆ ಎಂಬ ಆರೋಪಗಳಿದ್ದರೆ, ಅವುಗಳ ಸತ್ಯಾಸತ್ಯತೆಯನ್ನು ದಾಖಲೆಗಳು ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಯಾವುದೇ ಪೂರ್ವಗ್ರಹವಿಲ್ಲದೆ ತನಿಖೆ ನಡೆಸಬೇಕು. ತಪ್ಪು ಮಾಹಿತಿ ಅಥವಾ ನಿಯಮಬಾಹಿರ ವಿಧಾನಗಳನ್ನು ಬಳಸಿ ಅರ್ಹ ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಿರುವುದು ದೃಢಪಟ್ಟರೆ, ಅಂತಹ ಕೃತ್ಯಗಳಲ್ಲಿ ಭಾಗಿಯಾಗಿರುವವರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು SDPI ಆಗ್ರಹಿಸಿದೆ.

ಮತದಾರರು ತಮ್ಮ ಹೆಸರುಗಳನ್ನು ಪರಿಶೀಲಿಸಿ: SDPI ಕರೆ
ಪ್ರತಿಯೊಬ್ಬ ಮತದಾರರೂ ಈಗಿನಿಂದಲೇ ಜಾಗೃತರಾಗಬೇಕು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ತಮ್ಮ ಹೆಸರಿನ ವಿರುದ್ಧ ಯಾರಾದರೂ ಆಕ್ಷೇಪಣೆ ಅಥವಾ ಹೆಸರು ಅಳಿಸುವ ಮನವಿ ಸಲ್ಲಿಸಿದ್ದಾರೆಯೇ ಎಂಬುದನ್ನು ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿ (BLO) ಮೂಲಕ ಪರಿಶೀಲಿಸಿಕೊಳ್ಳಬೇಕು ಎಂದು SDPI ಮತದಾರರಿಗೆ ಕರೆ ನೀಡಿದೆ.
ಅರ್ಹ ಮತದಾರರ ಹೆಸರನ್ನು ಅಳಿಸುವ ಪ್ರಕ್ರಿಯೆ ತಮ್ಮ ಗಮನಕ್ಕೆ ಬಂದಲ್ಲಿ ಮೌನವಾಗಿರದೆ, ತಕ್ಷಣವೇ ಸಂಬಂಧಪಟ್ಟ ಚುನಾವಣಾಧಿಕಾರಿಗಳ ಗಮನಕ್ಕೆ ತರಬೇಕು. ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಿ ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳಬೇಕು. ತಮ್ಮ ಕುಟುಂಬದವರು, ನೆರೆಹೊರೆಯವರು ಹಾಗೂ ಪ್ರದೇಶದ ಇತರ ಮತದಾರರೂ ಮತದಾರರ ಪಟ್ಟಿಯನ್ನು ಪರಿಶೀಲಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಪಕ್ಷ ಮನವಿ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗಮನಕ್ಕೆ ಬಂದಿರುವ ಇಂತಹ ಪ್ರಕರಣಗಳ ಕುರಿತು ಜಿಲ್ಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ, ತನಿಖೆಯ ವಿವರಗಳು ಹಾಗೂ ಸತ್ಯಾಸತ್ಯತೆಯನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು. ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆ ತರುವ ಯಾವುದೇ ನಿಯಮಬಾಹಿರ ಕ್ರಮಗಳು ಕಂಡುಬಂದಲ್ಲಿ, ಅವುಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು SDPI ಜಿಲ್ಲಾ ಕಾರ್ಯದರ್ಶಿ ಶಫೀಕ್ ಮಲ್ಲೂರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

