ಅ.2ರಂದು ‘ಪ್ರಥಮ್ ಚಿಕಿತ್ಸಾ ಫೌಂಡೇಶನ್’ ಉದ್ಘಾಟನೆ ; ಡಾ. ಜೀದು ರಾಧಾಕೃಷ್ಣನ್

ಮಂಗಳೂರು: ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ ಹಾಗೂ ತುರ್ತು ವೈದ್ಯಕೀಯ ಕೌಶಲ್ಯಗಳನ್ನು ಕಲಿಸುವ ಉದ್ದೇಶದ ಹಿನ್ನಲೆಯಲ್ಲಿ ಆನ್ಲೈನ್ ಮುಖಾಂತರ ಪ್ರಥಮ್ ಚಿಕಿತ್ಸಾ ಫೌಂಡೇಶನ್’ (PCF) ಅ.2ರಂದು ಉದ್ಘಾಟನೆಗೊಳ್ಳಲಿದೆ ಎಂದು ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷ ಡಾ. ಜೀದು ರಾಧಾಕೃಷ್ಣನ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆರಂಭಿಸಿ ದೇಶದಾದ್ಯಂತ ಜನರನ್ನು ‘ಫಸ್ಟ್ ರೆಸ್ಪಾಂಡರ್ಸ್’ ಆಗಿ ತರಬೇತುಗೊಳಿಸುವುದು ಫೌಂಡೇಶನ್‌ನ ಪ್ರಮುಖ ಉದ್ದೇಶವಾಗಿದೆ ಎಂದರು.

ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ನೆರವು ದೊರೆಯುವ ಮುನ್ನವೇ ಸೂಕ್ತ ಪ್ರಥಮ ಚಿಕಿತ್ಸೆ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ಜನರಲ್ಲಿಯೇ ಪ್ರಥಮ ಚಿಕಿತ್ಸೆ ಹಾಗೂ ತುರ್ತು ಸ್ಪಂದನೆಯ ಕೌಶಲ್ಯ ಬೆಳೆಸುವ ಮೂಲಕ ಜೀವ ರಕ್ಷಣೆಯಲ್ಲಿ ಅವರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಸಂಸ್ಥೆಯ ಆಶಯವಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಸಮಯಕ್ಕೆ ಸರಿಯಾಗಿ ಪ್ರಥಮ ಚಿಕಿತ್ಸೆ, ತುರ್ತು ಆರೈಕೆ, ಆರೋಗ್ಯ ಜಾಗೃತಿ ಹಾಗೂ ಮಾನವೀಯ ನೆರವು ದೊರೆಯುವಂತೆ ಮಾಡುವುದು ಫೌಂಡೇಶನ್‌ನ ಮುಖ್ಯ ಧ್ಯೇಯವಾಗಿದೆ. ಈ ಮೂಲಕ ಸುರಕ್ಷಿತ, ಆರೋಗ್ಯಕರ ಹಾಗೂ ಕರುಣಾಪೂರ್ಣ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವ ಉದ್ದೇಶ ಹೊಂದಿದೆ ಎಂದರು.

ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ ಮತ್ತು ತುರ್ತು ವೈದ್ಯಕೀಯ ಕೌಶಲ್ಯಗಳ ತರಬೇತಿ ನೀಡುವುದರ ಜತೆಗೆ, ತಡೆಗಟ್ಟುವ ಆರೋಗ್ಯ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು, ವೈದ್ಯಕೀಯ ಹಾಗೂ ಮಾನವೀಯ ನೆರವು ಒದಗಿಸುವುದು, ಸ್ವಯಂಪ್ರೇರಿತ ರಕ್ತದಾನ ಮತ್ತು ಅಂಗದಾನವನ್ನು ಉತ್ತೇಜಿಸುವುದು ಹಾಗೂ ಸಂಕಷ್ಟದಲ್ಲಿರುವ ಸಮುದಾಯಗಳಿಗೆ ಕೈಗೆಟುಕುವ ಮತ್ತು ಸಮಗ್ರ ಸೇವೆ ಒದಗಿಸುವ ಕಾರ್ಯಗಳನ್ನು ಫೌಂಡೇಶನ್ ಕೈಗೊಳ್ಳಲಿದೆ ಎಂದು ತಿಳಿಸಿದರು.

ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರು ಹಾಗೂ ಸಮಾನ ಮನೋಭಾವದ ಕಾರ್ಯಕರ್ತರನ್ನು ಒಳಗೊಂಡ ತಂಡ ಫೌಂಡೇಶನ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಹಿರಿಯ ನಾಗರಿಕರು ಹಾಗೂ ದುರ್ಬಲ ವರ್ಗದವರ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ಸಂಸ್ಥೆಯ ಕಾರ್ಯದರ್ಶಿ ಫ್ರೀಡಾ ವಹಿಸಲಿದ್ದಾರೆ. ಮಹಿಳಾ ಆರೋಗ್ಯ ಮತ್ತು ಕಲ್ಯಾಣ ವಿಭಾಗದ ಜವಾಬ್ದಾರಿಯನ್ನು ಆಯಿಷಾ ನಿರ್ವಹಿಸಲಿದ್ದಾರೆ.

ತುರ್ತು ಸ್ಪಂದನೆ, ಸಿಪಿಆರ್ (CPR) ಹಾಗೂ ಆರೋಗ್ಯ ಜಾಗೃತಿ ಕುರಿತು ತರಬೇತಿ ನೀಡುವ ಕಾರ್ಯವನ್ನು ‘ಟ್ರೈನರ್ ಆಫ್ ಟ್ರೈನರ್ಸ್’ ಆಗಿರುವ ಡಾ. ರಂಜನ್ ವಹಿಸಲಿದ್ದಾರೆ. ಸಮುದಾಯ ಆರೋಗ್ಯ ಮತ್ತು ಕಲ್ಯಾಣ ವಿಭಾಗದ ಉಸ್ತುವಾರಿಯನ್ನು ಡಾ. ಪ್ರಜ್ವಲ್ ನೋಡಿಕೊಳ್ಳಲಿದ್ದು, ರಕ್ತದಾನ ಮತ್ತು ಅಂಗದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ರಮ್ಯಾ ನಿರ್ವಹಿಸಲಿದ್ದಾರೆ.

ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಆರಂಭಿಸಿ ಹಂತ ಹಂತವಾಗಿ ದೇಶದ ವಿವಿಧ ಭಾಗಗಳಿಗೆ ಫೌಂಡೇಶನ್‌ನ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ವಿಸ್ತರಿಸುವ ಉದ್ದೇಶವಿದೆ. ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಿ ಜೀವ ಉಳಿಸಲು ಸಾಧ್ಯವಾಗುವಂತಹ ತರಬೇತುಗೊಂಡ ಪ್ರಥಮ ಚಿಕಿತ್ಸಕರ ಜಾಲವನ್ನು ನಿರ್ಮಿಸುವುದು ಸಂಸ್ಥೆಯ ಆಶಯವಾಗಿದೆ ಎಂದು ಡಾ. ಜೀದು ರಾಧಾಕೃಷ್ಣನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ‘ಪ್ರಥಮ್ ಚಿಕಿತ್ಸಾ ಫೌಂಡೇಶನ್ ಪ್ರಮುಖರಾದ ಡಾ. ರಂಜನ್ , ಡಾ. ಪ್ರಜ್ವಲ್ , ರಮ್ಯಾ , ಆಯಿಷಾ , ಫ್ರೀಡಾ ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!