ಅ.6ರಂದು ಮಂಗಳೂರಿನಲ್ಲಿ ‘ಲವ್ ಜಿಹಾದ್ ಮತ್ತು ಮತಾಂತರ’ ಪುಸ್ತಕ ಬಿಡುಗಡೆ

ಮಂಗಳೂರು, ಅ.3: ಎಂ.ಜಿ. ಹೆಗಡೆ ರಚಿಸಿರುವ ‘ಲವ್ ಜಿಹಾದ್ ಮತ್ತು ಮತಾಂತರ (ಪ್ರಚಾರ ಮತ್ತು ವಾಸ್ತವ)’ ಪುಸ್ತಕವು ಅ.6ರಂದು ಮಂಗಳೂರಿನ ಪುರಭವನದಲ್ಲಿ ಬಿಡುಗಡೆಯಾಗಲಿದೆ ಎಂದು ಪುಸ್ತಕ ಬಿಡುಗಡೆ ಸಮಿತಿ ಅಧ್ಯಕ್ಷ, ವಕೀಲ ಯಶವಂತ ಮರೋಳಿ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಲವ್ ಜಿಹಾದ್, ಮತಾಂತರ, ಮದರಸಗಳಲ್ಲಿ ಭಯೋತ್ಪಾದನೆ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ದೂರು ಹಾಗೂ ಮನವಿಗಳ ಮಾಹಿತಿಯನ್ನು ಕೃತಿಯಲ್ಲಿ ದಾಖಲಿಸಲಾಗಿದೆ. 14 ಜಿಲ್ಲೆಗಳ ಸುಮಾರು 350 ಪೊಲೀಸ್ ಠಾಣೆಗಳಿಂದ ಆರ್‌ಟಿಐ ಮೂಲಕ ಸಂಗ್ರಹಿಸಿದ ಮಾಹಿತಿಯೊಂದಿಗೆ ರಾಜ್ಯ ಗೃಹ ಇಲಾಖೆಗೆ ಸಲ್ಲಿಕೆಯಾದ ದೂರು–ಮನವಿಗಳ ವಿವರ ಹಾಗೂ ದೇಶದಲ್ಲಿ ಉಲ್ಲೇಖಿಸಲಾದ 11 ಲವ್ ಜಿಹಾದ್ ಪ್ರಕರಣಗಳ ತನಿಖೆ ಮತ್ತು ನ್ಯಾಯಾಲಯದ ತೀರ್ಪುಗಳ ಮಾಹಿತಿಯನ್ನು ಕೃತಿಯಲ್ಲಿ ನೀಡಲಾಗಿದೆ ಎಂದರು.

ಕರಾವಳಿ ಭಾಗದಲ್ಲಿ ಕೋಮು ಕಾರಣಕ್ಕೆ ನಡೆದ ಕೊಲೆ ಪ್ರಕರಣಗಳ ತನಿಖೆಯ ಅಂತಿಮ ಸ್ಥಿತಿ ಸೇರಿದಂತೆ ವಿವಿಧ ವಿಚಾರಗಳ ದಾಖಲೆಗಳನ್ನು ಲೇಖಕರು ಸುಮಾರು ಒಂದು ವರ್ಷ ಕಾಲ ಸಂಗ್ರಹಿಸಿ ಕೃತಿ ರೂಪಿಸಿದ್ದಾರೆ. ಎಂ.ಜಿ. ಹೆಗಡೆ ಅವರು ಈ ಹಿಂದೆ ‘ಮಿನುಗು ನೋಟ’, ‘ಚಿಮಣಿ ಬೆಳಕಿನಿಂದ’, ‘ಭಾರತ ಮುಸ್ಲಿಂ ರಾಷ್ಟ್ರವಾಗುವುದೇ?’ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.

ಅ.6ರಂದು ಮಧ್ಯಾಹ್ನ 3.30ಕ್ಕೆ ದಾಖಲೆಗಳ ಪ್ರದರ್ಶನ ಉದ್ಘಾಟನೆ ಹಾಗೂ ಸಂಜೆ 5.30ಕ್ಕೆ ಪುಸ್ತಕ ಬಿಡುಗಡೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶವಂತ ಮರೋಳಿ ವಹಿಸಲಿದ್ದು, ಲೇಖಕ ಎಂ.ಜಿ. ಹೆಗಡೆ ಪುಸ್ತಕ ಪರಿಚಯ ಮಾಡಲಿದ್ದಾರೆ. ಚಿಂತಕ ಲಕ್ಷ್ಮೀಶ ಗಬ್ಬಲಡ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದು, ನ್ಯಾಯವಾದಿ ಹಾಗೂ ಹೋರಾಟಗಾರ ಸುಧೀರ್ ಮುರೊಳ್ಳಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಸಾಮಾಜಿಕ ಮುಖಂಡ ಪ್ರವೀಣ್ ವಾಲ್ಕೆ ದಾಖಲೆಗಳ ಪ್ರದರ್ಶನ ಉದ್ಘಾಟಿಸಲಿದ್ದಾರೆ.

ಖ್ಯಾತ ಕಲಾವಿದರಿಂದ ‘ಶರ ಸೇತು ಬಂಧನ’ ತಾಳಮದ್ದಳೆ ನಡೆಯಲಿದ್ದು, ಜಬ್ಬಾರ್ ಸುಮೊ, ದಿನೇಶ್ ಕಾವಳಕಟ್ಟೆ ಹಾಗೂ ಎಂ.ಜಿ. ಹೆಗಡೆ ಭಾಗವಹಿಸಲಿದ್ದಾರೆ. ಕ್ರಿಯಾ ಮಾಧ್ಯಮ ನಿರ್ದೇಶಕಿ ವಿಮಲಾ ಕೆ.ಎಸ್., ನಿವೃತ್ತ ಹಿರಿಯ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ ಸೇರಿದಂತೆ ಹಲವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪುಸ್ತಕ ಬಿಡುಗಡೆ ಸಮಿತಿ ಪ್ರಮುಖರಾದ ಚಿತ್ತರಂಜನ್ ಶೆಟ್ಟಿ, ರವಿ ಪೂಜಾರಿ ಸೂರಿಂಜೆ, ಯೋಗೀಶ್ ನಾಯಕ್ ಹಾಗೂ ಮಂಜುಳಾ ನಾಯಕ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!