ಮಂಗಳೂರು ನಗರದ ಅಳಕೆ ಕಂಬ್ಲ ಕ್ರಾಸ್ ರಸ್ತೆಯ ಸಹಯೋಗ ರೆಸಿಡೆನ್ಸಿ ಕಾಂಪ್ಲೆಕ್ಸ್‌ನ ಮನೆಯೊಂದರಲ್ಲಿ ನಡೆದ ಸುಮಾರು 14 ಲಕ್ಷ ರೂಪಾಯಿ ಮೌಲ್ಯದ ಮನೆಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಗುಜರಾತ್‌ನ ವಡೋದರಾದಲ್ಲಿ ಬಂಧಿಸಿದ್ದಾರೆ.

ಸೆಪ್ಟೆಂಬರ್ 28ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮನೆಯ ಬಾಗಿಲಿಗೆ ಬೀಗ ಹಾಕಿ ಮನೆಯವರು ಮಾರುಕಟ್ಟೆಗೆ ತೆರಳಿದ್ದರು. ಸಂಜೆ 5.10ರ ಸುಮಾರಿಗೆ ಹಿಂದಿರುಗಿ ಬಂದಾಗ ಮನೆಯ ಮುಂಭಾಗದ ಬಾಗಿಲಿನ ಕೊಂಡಿಯನ್ನು ಮುರಿದು ಕಳ್ಳರು ಒಳನುಗ್ಗಿರುವುದು ಗಮನಕ್ಕೆ ಬಂದಿದೆ. ಮನೆಯಲ್ಲಿದ್ದ ಚಿನ್ನಾಭರಣ, ನಗದು, ವಾಚ್ ಹಾಗೂ ಟ್ರಾಲಿ ಬ್ಯಾಗ್ ಸೇರಿದಂತೆ ಸುಮಾರು 14 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿತ್ತು.ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿತ್ತು.
ಇದೇ ವೇಳೆ, ಸೆಪ್ಟೆಂಬರ್ 27ರಂದು ಹಗಲು ವೇಳೆಯಲ್ಲಿ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬೊಕ್ಕಪಟ್ಣ ರಸ್ತೆಯ ಮನೆಯೊಂದರಲ್ಲೂ ಕಳ್ಳತನಕ್ಕೆ ಯತ್ನ ನಡೆದಿತ್ತು. ಮನೆಯ ಲಾಕರ್ ಮುರಿದಿದ್ದರೂ ಯಾವುದೇ ಬೆಲೆಬಾಳುವ ವಸ್ತುಗಳು ಸಿಗದ ಕಾರಣ ಚೆಕ್ ಪುಸ್ತಕಗಳನ್ನು ಕಳವು ಮಾಡಲಾಗಿತ್ತು. ಈ ಪ್ರಕರಣವೂ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಪ್ರಕರಣಗಳ ತನಿಖೆಯ ವೇಳೆ ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ವಿಶೇಷ ತಂಡ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿತು. ಮನೆಕಳ್ಳತನದ ಬಳಿಕ ಆರೋಪಿಗಳು ರೈಲಿನಲ್ಲಿ ದೆಹಲಿ ಕಡೆಗೆ ಪ್ರಯಾಣಿಸುತ್ತಿರುವುದು ಪತ್ತೆಯಾಯಿತು. ತಕ್ಷಣ ಗುಜರಾತ್ ಪೊಲೀಸರ ಸಹಕಾರ ಪಡೆಯಲಾಯಿತು.
ವಡೋದರಾ ಪೊಲೀಸರ ನೆರವಿನೊಂದಿಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರ ತಂಡ, ಸೆಪ್ಟೆಂಬರ್ 29ರಂದು ಪ್ರಕರಣ ದಾಖಲಾದ 24 ಗಂಟೆಗಳೊಳಗೆ ವಡೋದರಾದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು.
ಬಂಧಿತರಿಂದ ಕಳವು ಮಾಡಲಾಗಿದ್ದ ಸೊತ್ತುಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಬಂಧಿತರನ್ನು ವಡೋದರಾದಿಂದ ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಮುಂದಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಅರ್ಮಾನ್ ಖಾನ್ ವಿರುದ್ಧ ದೆಹಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಹೈದರಾಬಾದ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ 40ಕ್ಕೂ ಅಧಿಕ ಮನೆಕಳ್ಳತನ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅವರ ವಿರುದ್ಧ ವಾರಂಟ್ ಹಾಗೂ ಪ್ರೊಕ್ಲಮೇಶನ್ ಬಾಕಿ ಇರುವುದಾಗಿಯೂ ತಿಳಿದುಬಂದಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದೆ.
ಬಂಧಿತ ಆರೋಪಿಗಳನ್ನು ದೆಹಲಿಯ ಗೋಕುಲ್ ಪುರಿ ನಿವಾಸಿ, 34 ವರ್ಷದ ಅರ್ಮಾನ್ ಖಾನ್ ಅಲಿಯಾಸ್ ಅಮನ್ ಸೋನಿ ಹಾಗೂ ನವದೆಹಲಿಯ ಸುಲ್ತಾನ್ ಪುರಿ ನಿವಾಸಿ, 34 ವರ್ಷದ ಸಂಜೀವ್ ಕುಮಾರ್ ಅಲಿಯಾಸ್ ಜಾನಿ ಎಂದು ಗುರುತಿಸಲಾಗಿದೆ.

