ಕೊರಗ ಸಮುದಾಯಕ್ಕೆ ನಿವೇಶನ, ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಅ.12ರಂದು ಅರೆಬೆತ್ತಲೆ ಮೆರವಣಿಗೆ

ಮಂಗಳೂರು: ವಾಮಂಜೂರು ಮಂಗಳಜ್ಯೋತಿಯ ಆದಿವಾಸಿ ಕೊರಗ ಸಮುದಾಯದ ಸುಮಾರು 33 ಕುಟುಂಬಗಳಿಗೆ ನಿವೇಶನ ಹಾಗೂ ಹಕ್ಕುಪತ್ರಗಳನ್ನು ತಕ್ಷಣ ವಿತರಿಸುವಂತೆ ಆಗ್ರಹಿಸಿ ಅಕ್ಟೋಬರ್ 12ರಂದು ವಾಮಂಜೂರಿನಿಂದ ಪಡೀಲು ಜಂಕ್ಷನ್‌ವರೆಗೆ ಪಾದಯಾತ್ರೆ ಹಾಗೂ ಅರೆಬೆತ್ತಲೆ ಮೆರವಣಿಗೆ ನಡೆಸಲಾಗುವುದು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವಾಮಂಜೂರು ಘಟಕದ ಸಂಚಾಲಕ ಕರಿಯ ಕೆ. ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಿಂದ ನಿವೇಶನ ಹಸ್ತಾಂತರ ಪ್ರಕ್ರಿಯೆ ಬಾಕಿಯಿದ್ದು, 2022ರಿಂದ ಈವರೆಗೆ ಹಲವು ಹಂತಗಳಲ್ಲಿ ಹೋರಾಟ ನಡೆಸಿದರೂ ಸಮಸ್ಯೆ ಬಗೆಹರಿದಿಲ್ಲ. ಮೂಡಾದಿಂದ ಬಡಾವಣೆಗೆ ಅನುಮೋದನೆ ದೊರೆತಿದ್ದು, ರಸ್ತೆ, ಒಳಚರಂಡಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ₹2.83 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ಆದರೂ ನಿವೇಶನ ಹಂಚಿಕೆ ಹಾಗೂ ಹಕ್ಕುಪತ್ರ ವಿತರಣೆ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.

ಸೆಪ್ಟೆಂಬರ್ 17ರಂದು ಮಂಗಳೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರಿಗೆ ನಿವೇಶನ ನೀಡುವ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿರುವುದನ್ನು ಖಂಡಿಸಿದ ಅವರು, ಕೊರಗ ಸಮುದಾಯಕ್ಕೆ ಸೇರಿದ ಕುಟುಂಬಗಳಿಗೆ ನಿವೇಶನ ವಿತರಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡದೆ ತಕ್ಷಣ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಅಕ್ಟೋಬರ್ 12ರಂದು ಬೆಳಿಗ್ಗೆ 9ಕ್ಕೆ ವಾಮಂಜೂರು ಜಂಕ್ಷನ್‌ನಲ್ಲಿ ಮೆರವಣಿಗೆ ಆರಂಭವಾಗಲಿದ್ದು, ವಿವಿಧ ಪ್ರಮುಖ ಕೇಂದ್ರಗಳಲ್ಲಿ ಸಭೆ ನಡೆಸಿ ಮಧ್ಯಾಹ್ನ 1.30ಕ್ಕೆ ಪಡೀಲು ಜಂಕ್ಷನ್‌ನಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮನ್ವಯ ಸಮಿತಿಯ ಪ್ರಮುಖರಾದ ಶೇಖರ್ ವಾಮಂಜೂರು, ವಿಘ್ನೇಶ್ ವಾಮಂಜೂರು, ಪೂರ್ಣಿಮಾ ಹಾಗೂ ಸುನಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!