ಮಂಗಳೂರು: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರ ನೇತೃತ್ವದಲ್ಲಿ ಸುಲ್ತಾನ್ ಬತ್ತೇರಿಯ ಎಡ್ಜ್ ವಾಟರ್‌ನ ಮುಕ್ತಾಂಗಣ ನದಿ ತೀರದಲ್ಲಿ ಅ.18ರಂದು ನಡೆದ ‘ದಾಂಡಿಯಾ ನೈಟ್ 2.0’ ಕಾರ್ಯಕ್ರಮ ನೃತ್ಯ, ಸಂಗೀತ ಹಾಗೂ ಮನರಂಜನೆಯ ಸಂಭ್ರಮಕ್ಕೆ ಸಾಕ್ಷಿಯಾಯಿತು. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಖ್ಯಾತ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರು ಐಕ್ಯಂ ಮತ್ತು ಅರಿವು ವಿಶೇಷ ಶಾಲೆಗಳ ಮಕ್ಕಳೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು.

ವಿಶೇಷ ಶಾಲೆಗಳ ಮಕ್ಕಳನ್ನು ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಹ್ವಾನಿಸಿ, ಅವರೊಂದಿಗೆ ಉದ್ಘಾಟನಾ ಕಾರ್ಯಕ್ರಮ ನಡೆಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗೈದ ಎಂ.ಆರ್. ಪೂವಮ್ಮ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಜೆ ಪ್ರಜ್ವಲ್ ಮತ್ತು ಅಶ್ವಿನಿ ಅವರ ಸಂಗೀತ, ನಿರೂಪಕಿ ಸೌಜನ್ಯ ಅವರ ನಿರೂಪಣೆ, ನ್ಯೂ ಓಷನ್ ಕಿಡ್ಸ್ ನೃತ್ಯ ತಂಡದ ಪ್ರದರ್ಶನ ಹಾಗೂ ಪಂಜಾಬಿ ಡೋಲ್ ಪ್ರೇಕ್ಷಕರನ್ನು ರಂಜಿಸಿದವು. ದಾಂಡಿಯಾ ನೃತ್ಯಗೀತೆಗಳಿಗೆ ಹೆಜ್ಜೆ ಹಾಕಿದವರು ಸಂಭ್ರಮಿಸಿದರು.

ವಿವಿಧ ಆಹಾರ ಮಳಿಗೆಗಳು, ಫೋಟೋ ಬೂತ್‌ಗಳು ಹಾಗೂ ಮನರಂಜನಾ ಆಟಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ಉಚಿತ ಸ್ವಾಗತ ಪಾನೀಯ ಮತ್ತು ದಾಂಡಿಯಾ ಕಡ್ಡಿಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ವಿಶೇಷ ಮಕ್ಕಳನ್ನು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಒಳಗೊಳ್ಳುವ ಮೂಲಕ ಸಾಮಾಜಿಕ ಕಾಳಜಿ, ಸಮಾನತೆ ಹಾಗೂ ಎಲ್ಲರನ್ನೂ ಒಳಗೊಳ್ಳುವ ಮನೋಭಾವಕ್ಕೆ ಕಾರ್ಯಕ್ರಮ ಆದ್ಯತೆ ನೀಡಿತು.

