ಉಪ್ಪಿನಂಗಡಿಯಲ್ಲಿ ತಲ್ವಾರ್, ಬಿಯರ್ ಬಾಟಲಿ ಹಿಡಿದು ಎರಡು ಗುಂಪುಗಳ ಮಾರಾಮಾರಿ: ಇಬ್ಬರು ವಶಕ್ಕೆ

ಮಂಗಳೂರು: ತಲ್ವಾರ್ ಹಾಗೂ ಬಿಯರ್ ಬಾಟಲಿ ಹಿಡಿದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಉಪ್ಪಿನಂಗಡಿಯ ಕಾರ್ತಿಕ್ ಬಾರ್ ಹೊರಭಾಗದಲ್ಲಿ ಅಕ್ಟೋಬರ್ 18ರ ರಾತ್ರಿ ಸಂಭವಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಇಳಂತಿಲ ವಾಸಿ ಮಂಜುನಾಥ್ ಹಾಗೂ ಕರವಲು ವಾಸಿ ವಿಶ್ವನಾಥ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಆರೋಪಿ ಕರವಲು ನಿವಾಸಿ ಮುನ್ನಾ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಮದ್ಯದ ಅಮಲಿನಲ್ಲಿದ್ದ ಗುಂಪು ಬಾರ್ ಹೊರಗಿನ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ನಡೆಸಿ, ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿತ್ತು. ಗಲಾಟೆಯ ವೇಳೆ ಮಂಜುನಾಥ್ ತಲ್ವಾರ್ ಬೀಸುತ್ತಿದ್ದರೆ, ಮುನ್ನಾ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡಿದ್ದನು.

ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಉಪ್ಪಿನಂಗಡಿ ಪೊಲೀಸರು, ತಕ್ಷಣ ಕಾರ್ಯಪ್ರವೃತ್ತರಾಗಿ ಮಂಜುನಾಥ್‌ನನ್ನು ಬಂಧಿಸಿ ಆತನ ಬಳಿಯಿದ್ದ ತಲ್ವಾರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಪೊಲೀಸರನ್ನು ಕಂಡ ಕೂಡಲೇ ಮುನ್ನಾ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳ ವಿಚಾರಣೆ ವೇಳೆ ಕುಡಿದ ಮತ್ತಿನಲ್ಲಿ ಮುನ್ನ ಎಂಬಾತನು ಮಂಜುನಾಥ್ ಎಂಬಾತನ ಮನೆಯವರಿಗೆ ಅವಾಚ್ಯವಾಗಿ ಬೈದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದು ಗಲಾಟೆಯಾಗಿರುವುದಾಗಿ ತಿಳಿದುಬಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!