ಮಂಜೇಶ್ವರದಲ್ಲಿ ಹಲಸಿನ ಸಂಭ್ರಮ: ಮೂರು ದಿನಗಳ ಮೇಳಕ್ಕೆ ಜನಸಾಗರ, ಯಶಸ್ವಿಯಾಗಿ ತೆರೆ

ಮಂಜೇಶ್ವರ: ಸಪ್ತ ಭಾಷಾ ಸಂಗಮ ಭೂಮಿ ಮಂಜೇಶ್ವರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾದ ಮೂರು ದಿನಗಳ ‘ಹಲಸು ಹಣ್ಣಿನ ಮೇಳ’ ಭಾನುವಾರ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಜುಲೈ 10ರಿಂದ 12ರವರೆಗೆ ನಡೆದ ಮೇಳಕ್ಕೆ ಸಾವಿರಾರು ಮಂದಿ ಆಗಮಿಸಿ ಹಲಸಿನ ವೈವಿಧ್ಯಮಯ ತಳಿಗಳು, ಖಾದ್ಯಗಳು ಹಾಗೂ ಕೃಷಿ ಉತ್ಪನ್ನಗಳನ್ನು ವೀಕ್ಷಿಸಿ ಖರೀದಿಸುವ ಮೂಲಕ ಮೇಳವನ್ನು ಯಶಸ್ವಿಗೊಳಿಸಿದರು.

ಮಂಜೇಶ್ವರ ಮೆಜೆಸ್ಟಿಕ್ ಮ್ಯಾನರ್ (ಕಲಾ ಸ್ಪರ್ಶಂ) ಸಭಾಂಗಣದಲ್ಲಿ ನಡೆದ ಮೇಳವನ್ನು ಮಂಜೇಶ್ವರ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷೆ ಜೀನ್ ಲವಿನಾ ಮೊಂತೆರೋ ಉದ್ಘಾಟಿಸಿದ್ದರು. ಮಾರಾಟ ಮಳಿಗೆಗೆ ವಾರ್ಡ್ ಸದಸ್ಯ ಅಬ್ದುಲ್ಲಾ ಗುಡ್ಡಕ್ಕೇರಿ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳಾದ ರತ್ನಾಕರ, ಜಯಂತಿ, ಎಂ. ಹರೀಶ್ ಭಟ್, ಸಿದ್ದೀಖ್, ರಾಜೇಶ್, ಆಯೋಜಕರಾದ ರತನ್ ಕುಮಾರ್ ಹೊಸಂಗಡಿ, ಕೀರ್ತನ್ ಕಡಂಬಾರ್, ಸಂದೇಶ್ ಪುತ್ರನ್, ಭಾಸ್ಕರ ಪೂಚಾರಿ, ಪ್ರಕಾಶ್ ಕೀರ್ತೇಶ್ವರ ಹಾಗೂ ಪತ್ರಕರ್ತರು ಮತ್ತು ಗಣ್ಯರು ಉಪಸ್ಥಿತರಿದ್ದರು.

ಮೇಳದಲ್ಲಿ ತುಮಕೂರು ಮತ್ತು ಪಾಂಡಿಚೇರಿಯ ‘ಚಂದ್ರ ಹಲಸು’ ಸೇರಿದಂತೆ ವಿವಿಧ ತಳಿಯ ಹಲಸುಗಳು, ಬೆಂಗಳೂರು ಮತ್ತು ರಾಮನಗರದಿಂದ ತರಲಾಗಿದ್ದ ವಿಶೇಷ ಮಾವಿನ ತಳಿಗಳು ಪ್ರಮುಖ ಆಕರ್ಷಣೆಯಾಗಿದ್ದವು. ಹಲಸಿನ ವಿವಿಧ ತಳಿಗಳು, ಸಸಿಗಳು ಹಾಗೂ ಕೃಷಿ ಮಾಹಿತಿಯ ಬಗ್ಗೆ ಸಾರ್ವಜನಿಕರು ಆಸಕ್ತಿಯಿಂದ ಮಾಹಿತಿ ಪಡೆದರು.

ಹಲಸಿನಿಂದ ತಯಾರಿಸಿದ ಅಪ್ಪ, ಜಿಲೇಬಿ, ಹೋಳಿಗೆ, ಕಬಾಬ್, ಮಂಚೂರಿ, ಬಿರಿಯಾನಿ, ಹಪ್ಪಳ, ಚಿಪ್ಸ್, ಜಾಮ್, ಉಪ್ಪಿನಕಾಯಿ, ಐಸ್‌ಕ್ರೀಂ ಹಾಗೂ ಅಪ್ಪೆಮಿಡಿ ಚಟ್ನಿ ಸೇರಿದಂತೆ ಹಲವು ಮೌಲ್ಯವರ್ಧಿತ ಉತ್ಪನ್ನಗಳು ಗ್ರಾಹಕರ ಮೆಚ್ಚುಗೆ ಗಳಿಸಿದವು. ವಿಶೇಷವಾಗಿ ಹಲಸಿನ ಜಿಲೇಬಿ, ಹೋಳಿಗೆ ಮತ್ತು ಐಸ್‌ಕ್ರೀಂಗೆ ಉತ್ತಮ ಬೇಡಿಕೆ ಕಂಡುಬಂತು.

ಇದರೊಂದಿಗೆ ಇಳಕಲ್ ಮತ್ತು ಮೈಸೂರು ಸಿಲ್ಕ್ ಸೀರೆಗಳು, ಚನ್ನಪಟ್ಟಣದ ಬೊಂಬೆಗಳು, ಮಣ್ಣಿನ ಆಭರಣಗಳು, ಬೇಲೂರಿನ ಶಿಲಾಮೂರ್ತಿಗಳು, ಆಯುರ್ವೇದ ಉತ್ಪನ್ನಗಳು, ವಿವಿಧ ಹಣ್ಣಿನ ಗಿಡಗಳು, ತರಕಾರಿ ಬೀಜಗಳು ಹಾಗೂ ಹೂವಿನ ಗಿಡಗಳ ಮಳಿಗೆಗಳು ಕೂಡ ಸಾರ್ವಜನಿಕರನ್ನು ಆಕರ್ಷಿಸಿದವು.

ಮೇಳಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಉಚಿತ ಹಲಸಿನ ಜಿಲೇಬಿ ವಿತರಿಸಲಾಯಿತು. ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಫೋಟೋ ತೆಗೆದು ವಾಟ್ಸಾಪ್ ಸ್ಟೇಟಸ್ ಹಂಚಿಕೊಂಡವರಿಗೆ ಸದ್ಗುರು ಆಯುರ್ವೇದ ಸಾಬೂನು ಉಡುಗೊರೆಯಾಗಿ ನೀಡಲಾಯಿತು. ಹಳೆಯ ಜರಿ ರೇಷ್ಮೆ ಸೀರೆಗಳನ್ನು ನೀಡಿ ಹಣ ಪಡೆಯುವ ವಿಶೇಷ ವ್ಯವಸ್ಥೆಯೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.

ಒಟ್ಟಾರೆ, ಮಂಜೇಶ್ವರದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಈ ಹಲಸು ಹಣ್ಣಿನ ಮೇಳಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ಕೃಷಿ, ಆಹಾರ ಸಂಸ್ಕೃತಿ ಹಾಗೂ ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಯಶಸ್ವಿ ಉತ್ಸವವಾಗಿ ಮೇಳ ಗುರುತಿಸಿಕೊಂಡಿದೆ. ಮುಂದಿನ ವರ್ಷ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮೇಳ ಆಯೋಜಿಸಬೇಕೆಂಬ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!