ಬೋಳಿಯಾರ್ ಅಪಘಾತದಲ್ಲಿ ಮೃತಪಟ್ಟ ಜುನೈದ್ ಮತ್ತು ಅಫ್ರಾಝ್ ಕುಟುಂಬಕ್ಕೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸಾಂತ್ವನ

ಉಳ್ಳಾಲ: ಅಕ್ಟೋಬರ್ 19ರಂದು ಮಂಗಳೂರು ಹೊರವಲಯದ ಬೋಳಿಯಾರ್ ಸಮೀಪ ಪಿಕಪ್ ವಾಹನ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಾವಿಗೀಡಾದ ಕಿನ್ಯ–ಉಕ್ಕುಡದ ಯುವಕರಾದ ಜುನೈದ್ ಮತ್ತು ಅಫ್ರಾಝ್ ಅವರ ಮನೆಗೆ ಬಿಜೆಪಿ ಮಂಗಳೂರು ಕ್ಷೇತ್ರ ಅಲ್ಪಸಂಖ್ಯಾತ ಮೋರ್ಚಾದ ನಿಯೋಗ ಶುಕ್ರವಾರ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿತು.

ಘಟನೆಯ ಕುರಿತು ಕುಟುಂಬದವರಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡ ನಿಯೋಗ, ದುಃಖತಪ್ತ ಕುಟುಂಬಗಳಿಗೆ ಧೈರ್ಯ ತುಂಬಿತು. ಈ ದುಃಖದ ಸಂದರ್ಭದಲ್ಲಿ ಕುಟುಂಬದವರೊಂದಿಗೆ ನಿಲ್ಲುವುದಾಗಿ ತಿಳಿಸಿದ ನಿಯೋಗ, ನ್ಯಾಯ ದೊರೆಯುವವರೆಗೆ ಕಾನೂನು ಹೋರಾಟಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿತು. ಅಗತ್ಯವಿದ್ದಲ್ಲಿ ಪ್ರಕರಣದ ನ್ಯಾಯಾಂಗ ಹೋರಾಟಕ್ಕಾಗಿ ಪ್ರತ್ಯೇಕ ನ್ಯಾಯವಾದಿಯನ್ನು ನೇಮಿಸಿ ಸಹಕರಿಸುವುದಾಗಿಯೂ ತಿಳಿಸಿತು.

ಆರ್ಥಿಕವಾಗಿ ಹಿಂದುಳಿದಿರುವ ಎರಡೂ ಕುಟುಂಬಗಳ ಸಂಕಷ್ಟವನ್ನು ಪರಿಗಣಿಸಿ, ಸರ್ಕಾರ ಮಾನವೀಯ ದೃಷ್ಟಿಕೋನದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ನಿಯೋಗ ಆಗ್ರಹಿಸಿತು. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ, ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ಕ್ಷೇತ್ರದ ಅಧ್ಯಕ್ಷ ಜಗದೀಶ್ ಆಳ್ಗ ಕುವೆತ್ತಬೈಲ್, ಜಿಲ್ಲಾ ವಕ್ತಾರ ಹೇಮಂತ್ ಶೆಟ್ಟಿ ದೇರಳಕಟ್ಟೆ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಟಿ.ಎ. ಶಹನವಾಝ್ ಕೂಳೂರು, ಮಂಗಳೂರು ಕ್ಷೇತ್ರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಿದ್ದೀಕ್ ತಲಪಾಡಿ, ಜಿಲ್ಲಾ ಉಪಾಧ್ಯಕ್ಷ ಅಸ್ಗರ್ ಮುಡಿಪು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತಸ್ಲೀಂ ಹರೇಕಳ, ಉಪಾಧ್ಯಕ್ಷ ಕಲಂದರ್ ಕೋಟೆಕಾರ್, ಮಾಜಿ ಅಧ್ಯಕ್ಷ ಕರೀಂ ಉಚ್ಚಿಲ್, ಮುಖಂಡ ಪ್ರದೀಪ್ ಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!