ವೆರಾವಲ್ ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯಲ್ಲಿ ದರೋಡೆ: ಲಕ್ಷಾಂತರ ರೂ. ಮೌಲ್ಯದ ವಿದೇಶಿ ಕರೆನ್ಸಿ ಕಳವು

ಕಾಸರಗೋಡು : ಪರಪ್ಪನಂಗಡಿಯಿಂದ ಉಡುಪಿಗೆ ವೆರಾವಲ್ ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಲಪ್ಪುರಂ ಮೂಲದ ಉಮ್ಮರ್ ಬಾವ ಎಂಬವರಿಂದ ಸುಮಾರು 25,000 ಸೌದಿ ರಿಯಲ್ (ರೂ.6.35 ಲಕ್ಷ) ದರೋಡೆ ಮಾಡಲಾಗಿದೆ.

ಅಕ್ಟೋಬರ್ 20ರ ಮುಂಜಾನೆ 3.15ಕ್ಕೆ ರೈಲು ಹೊಸದುರ್ಗ ನಿಲ್ದಾಣ ತಲುಪಿದಾಗ, ತಮ್ಮನ್ನು ‘ಡಾನ್ಸಾಫ್’ ಪೊಲೀಸ್ ಸ್ಕ್ವಾಡ್‌ನವರೆಂದು ಪರಿಚಯಿಸಿಕೊಂಡ ಅನಾಮಧೇಯ ದುಷ್ಕರ್ಮಿಗಳು ಉಮ್ಮರ್ ಅವರ ಬ್ಯಾಗ್‌ನಲ್ಲಿದ್ದ ಸೌದಿ ಕರೆನ್ಸಿಯನ್ನು ಬಲವಂತವಾಗಿ ಕಸಿದುಕೊಂಡು ಪರಾರಿಯಾಗಿದ್ದಾರೆನ್ನಲಾಗಿದೆ.

​ಈ ಹಣವನ್ನು ಕಾಸರಗೋಡಿನ ವ್ಯಕ್ತಿಯೊಬ್ಬರಿಗೆ ನೀಡಲು ತರಲಾಗುತ್ತಿತ್ತು ಎನ್ನಲಾಗಿದ್ದು, ಘಟನೆ ಸಂಬಂಧ ಅಕ್ಟೋಬರ್ 22ರಂದು ಕಾಸರಗೋಡು ರೈಲ್ವೇ ಪೊಲೀಸರಿಗೆ ದೂರು ನೀಡಲಾಗಿದೆ.

ಕೃತ್ಯ ಎಸಗಿದವರು ಹವಾಲಾ ಅಥವಾ ವಿಮಾನ ನಿಲ್ದಾಣಗಳಿಂದ ಬರುವವರನ್ನು ಹಿಂಬಾಲಿಸಿ ದರೋಡೆ ಮಾಡುವ ‘ಪೊಟ್ಟಿಕಲ್’ ಗ್ಯಾಂಗ್‌ಗೆ ಸೇರಿದವರಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಸ್ತುತ ಹೊಸದುರ್ಗ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿರುವ ರೈಲ್ವೇ ಪೊಲೀಸರು, ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!