ಮಂಗಳೂರು: ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ರಾಜ್ಯೋತ್ಸವವು ಕೇವಲ ನಾಮಕಾವಸ್ಥೆಯ ಸಂಭ್ರಮಾಚರಣೆಗೆ ಸೀಮಿತವಾಗಬಾರದು. ಕನ್ನಡಿಗರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಹಾಗೂ ಅವರ ಉದ್ಯೋಗ ಹಕ್ಕುಗಳನ್ನು ರಕ್ಷಿಸಲು ಇದು ಸೂಕ್ತ ಸಮಯವಾಗಿದೆ ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಆಗ್ರಹಿಸಿದರು.



ರಾಜ್ಯದಲ್ಲಿ ಕನ್ನಡ ಭಾಷೆ, ನಾಡು ಮತ್ತು ಸಂಸ್ಕೃತಿಯ ಉಳಿವಿಗಾಗಿ ದಶಕಗಳಿಂದ ನಿರಂತರ ಹೋರಾಟಗಳು ನಡೆಯುತ್ತಿವೆ. ಆದರೂ ಈ ಹೋರಾಟಗಳಿಗೆ ಇಂದಿಗೂ ತಾರ್ಕಿಕ ಅಂತ್ಯ ದೊರೆತಿಲ್ಲ. ಆಡಳಿತ ನಡೆಸುವ ಸರ್ಕಾರಗಳು ಈ ಗಂಭೀರ ವಿಚಾರಗಳ ಬಗ್ಗೆ ಗಮನಹರಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ದುರದೃಷ್ಟಕರ ಎಂದು ಅವರು ಕಳವಳ ವ್ಯಕ್ತಪಡಿಸಿದರು.

1984ರಿಂದ 1986ರ ಅವಧಿಯಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಡಾ. ಸರೋಜಿನಿ ಮಹಿಷಿ ಅವರ ನೇತೃತ್ವದಲ್ಲಿ ಸಿದ್ಧಪಡಿಸಲಾದ ವರದಿಯು ಕನ್ನಡಿಗರ ಉದ್ಯೋಗಾವಕಾಶಗಳ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ಯೋಗಗಳು ಹಾಗೂ ಸಿ ಮತ್ತು ಡಿ ದರ್ಜೆಯ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ಹಾಗೂ ಸೂಕ್ತ ಮೀಸಲಾತಿ ಕಲ್ಪಿಸಬೇಕು. ಅದೇ ರೀತಿ, ಕರ್ನಾಟಕದಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ವಾಸವಿರುವ ಸ್ಥಳೀಯರಿಗೆ ಖಾಸಗಿ ಕೈಗಾರಿಕೆಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಆದ್ಯತೆಯ ಮೇರೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಬೇಕು ಎಂಬುದು ವರದಿಯ ಪ್ರಮುಖ ಶಿಫಾರಸುಗಳಾಗಿವೆ.
ಅಂದಿನಿಂದ ಇಂದಿನವರೆಗೆ ರಾಮಕೃಷ್ಣ ಹೆಗಡೆ, ಎಸ್.ಆರ್. ಬೊಮ್ಮಾಯಿ, ವೀರೇಂದ್ರ ಪಾಟೀಲ್, ಧರಮ್ ಸಿಂಗ್, ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ, ಬಿ.ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಮುಖ್ಯಮಂತ್ರಿಗಳಾಗಿ ಆಡಳಿತ ನಡೆಸಿದ್ದರೂ, ಸರೋಜಿನಿ ಮಹಿಷಿ ವರದಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ರಾಜ್ಯದ ಯುವಜನತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ರಿಯಾಝ್ ಕಡಂಬು ಆಗ್ರಹಿಸಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ‘ಒಲವಿನ ಕರ್ನಾಟಕ’ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಸಂದೇಶ ಭಾಷಣ ಮಾಡುತ್ತಾ ಈ ಆಗ್ರಹ ವ್ಯಕ್ತಪಡಿಸಿದರು.

ಕರ್ನಾಟಕದ ಏಕತೆ, ಸಹಬಾಳ್ವೆ ಮತ್ತು ಸಮಾನತೆಯೇ ನಾಡಿಗೆ ಸಲ್ಲಿಸುವ ನಿಜವಾದ ಗೌರವ: ಅನ್ವರ್ ಸಾದಾತ್ ಬಜತ್ತೂರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನಡೆಸಿ ಮಾತನಾಡಿದ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಸಾವಿರಾರು ವರ್ಷಗಳ ಇತಿಹಾಸ, ಶ್ರೀಮಂತ ಸಂಸ್ಕೃತಿ, ವೈವಿಧ್ಯಮಯ ಪರಂಪರೆ ಹಾಗೂ ಸಾಹಿತ್ಯ, ಕಲೆ, ವಿಜ್ಞಾನ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ ಹೆಮ್ಮೆಯ ನಾಡು ನಮ್ಮ ಕರ್ನಾಟಕ. ಇದು ಕೇವಲ ಭೌಗೋಳಿಕ ಗಡಿಯಲ್ಲ, ನಮ್ಮ ಅಸ್ಮಿತೆ. ಇದು ಕೇವಲ ಭಾಷೆಯಲ್ಲ, ನಮ್ಮ ಬದುಕಿನ ಭಾವನೆ. ಇದು ಕೇವಲ ನೆಲವಲ್ಲ, ನಮ್ಮ ಪೂರ್ವಜರ ಪರಿಶ್ರಮ, ತ್ಯಾಗ ಮತ್ತು ಕನಸುಗಳ ಪ್ರತೀಕ.
ನಮ್ಮ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ನಾಡಿನ ಏಕತೆ, ಸಹಬಾಳ್ವೆ, ಸಮಾನತೆ ಮತ್ತು ಸರ್ವರ ಅಭಿವೃದ್ಧಿಗಾಗಿ ಕೈಜೋಡಿಸುವುದೇ ಕರ್ನಾಟಕಕ್ಕೆ ನಾವು ಸಲ್ಲಿಸುವ ನಿಜವಾದ ಗೌರವ ಮತ್ತು ಸೇವೆಯಾಗಿದೆ ಎಂದು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಜಿಲ್ಲಾ ಸಮಿತಿಯ ಕೋಶಾಧಿಕಾರಿ ರಹೀಮ್ ಇಂಜಿನಿಯರ್, ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಶಾಹುಲ್ ಹಮೀದ್ ಎಸ್.ಎಚ್., ಮೂಡುಬಿದಿರೆ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇರ್ಷಾದ್ ಹಳೆಯಂಗಡಿ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ನಿರೂಪಿಸಿ, ದನ್ಯವಾದಗೈದರು.

