ತಲಪಾಡಿ ಷಟ್ಪಥ ರಸ್ತೆಯ ‘ಮೃತ್ಯು ಕೂಪ’: ಹೆದ್ದಾರಿ ಇಂಜಿನಿಯರಿಂಗ್‌ ಎಡವಟ್ಟು, ಅಧಿಕಾರಿಗಳ ಮೌನಕ್ಕೆ ಬಲಿಯಾಗುತ್ತಿವೆ ಅಮಾಯಕ ಜೀವಗಳು

​

ಮಂಜೇಶ್ವರ : ಕೇರಳ-ಕರ್ನಾಟಕ ಗಡಿಭಾಗದ ಪ್ರಮುಖ ಪ್ರವೇಶದ್ವಾರವಾಗಿರುವ ತಲಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯು ಈಗ ವಾಹನ ಸವಾರರ ಪಾಲಿಗೆ ‘ಯಮಸ್ವರೂಪ’ವಾಗಿ ಪರಿಣಮಿಸಿದೆ. ಷಟ್ಪಥ ರಸ್ತೆಯು ಬಂದು ಕೊನೆಗೊಳ್ಳುವ ಜಾಗದಲ್ಲಿ ರಸ್ತೆಯು ತಕ್ಕಷ್ಟು ಅಗಲವಿಲ್ಲದೆ ಕಿರಿದಾಗುತ್ತಿರುವುದು ಮತ್ತು ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಇಲ್ಲಿ ಪ್ರತಿದಿನ ಭೀಕರ ಅಪಘಾತಗಳು ಸಂಭವಿಸುತ್ತಿದ್ದು, ಹಲವು ಅಮಾಯಕ ಜೀವಗಳು ಈಗಾಗಲೇ ಬಲಿಯಾಗಿವೆ.ಆದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.


​ಕಾಸರಗೋಡು ಭಾಗದಿಂದ ಅತಿವೇಗವಾಗಿ ಮೂರು ಟ್ರ್ಯಾಕ್‌ಗಳಲ್ಲಿ ಬರುವ ವಾಹನಗಳು, ತಲಪಾಡಿಯಲ್ಲಿ ಷಟ್ಪಥ ರಸ್ತೆ ಕೊನೆಗೊಳ್ಳುವ ಹಂತಕ್ಕೆ ತಲುಪುತ್ತಿದ್ದಂತೆ ಇದ್ದಕ್ಕಿದ್ದಂತೆ ಒಂದೇ ವಾಹನ ಸಂಚರಿಸುವಷ್ಟು ಕಿರಿದಾಗುತ್ತದೆ. ಹೆದ್ದಾರಿಯ ಈ ವಿಚಿತ್ರ ವಿನ್ಯಾಸದಿಂದಾಗಿ ದೂರದಿಂದ ಅತಿವೇಗದಲ್ಲಿ ಬರುವ ವಾಹನ ಸವಾರರು ಒಮ್ಮೆಲೆ ಗೊಂದಲಕ್ಕೀಡಾಗಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ.

ಇಲ್ಲಿನ ಸರ್ವೀಸ್ ರಸ್ತೆಗಳಿಂದ ಕರ್ನಾಟಕದ ಕಡೆಗೆ ತೆರಳಲು ವಾಹನಗಳು ರಸ್ತೆ ದಾಟುವುದು ಸಾಹಸದ ಕೆಲಸವಾಗಿದೆ. ಯಾವುದೇ ಸುರಕ್ಷಿತ ವ್ಯವಸ್ಥೆ ಇಲ್ಲದಿರುವುದರಿಂದ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಖಾಸಗಿ ಬಸ್‌ಗಳು ನಿಲ್ದಾಣದೊಳಗೆ ಹೋಗದೆ ನೇರವಾಗಿ ರಾಷ್ಟ್ರೀಯ ಹೆದ್ದಾರಿಯ ಮೇಲೆಯೇ ನಿಲುಗಡೆಗೊಳಿಸುತ್ತಿವೆ. ಇದರಿಂದಾಗಿ ಮಂಗಳೂರು ಭಾಗದಿಂದ ಆಗಮಿಸುವ ಇತರೆ ವಾಹನಗಳಿಗೆ ಎದುರಿನಿಂದ ಬರುವ ವಾಹನಗಳು ಗೋಚರಿಸದೆ ಸರಣಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗಿದೆ.

​ಈ ಸ್ಥಳದಲ್ಲಿ ಈಗಾಗಲೇ ಹಲವು ಭೀಕರ ಅಪಘಾತಗಳು ಸಂಭವಿಸಿದ್ದು, ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಹಲವರು ಅಂಗವಿಕಲರಾಗಿದ್ದಾರೆ. ರಸ್ತೆಯನ್ನು ಕೂಡಲೇ ಅಗಲೀಕರಣಗೊಳಿಸುವಂತೆ ಹಾಗೂ ಈ ಸೂಕ್ಷ್ಮ ಜಂಕ್ಷನ್‌ನಲ್ಲಿ ಒಂದು ‘ಟ್ರಾಫಿಕ್ ಸರ್ಕಲ್’ ನಿರ್ಮಿಸುವಂತೆ ಕೋರಿ ಸ್ಥಳೀಯರು ಜಿಲ್ಲಾಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ್ದಾರೆ. ಆದರೆ, ಕಾಗದದ ಮೇಲಿನ ಮನವಿಗಳು ಕಚೇರಿಯ ಕಡತಗಳಲ್ಲೇ ಕೊಳೆಯುತ್ತಿವೆಯೇ ಹೊರತು, ಅಧಿಕಾರಿಗಳ ಕಡೆಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.

​ಇನ್ನಷ್ಟು ಜೀವಗಳು ಬಲಿಯಾಗುವವರೆಗೆ ಸರ್ಕಾರ ಕಾಯುತ್ತಿದೆಯೇ?” ಎಂದು ಸ್ಥಳೀಯ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡು ತಲಪಾಡಿಯ ಈ ಮಾರಕ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ಕೂಡಲೇ ಅಲ್ಲಿ ವೈಜ್ಞಾನಿಕವಾಗಿ ಒಂದು ಸರ್ಕಲ್ ನಿರ್ಮಿಸಿ, ಬಸ್ ನಿಲುಗಡೆ ನಿಯಂತ್ರಿಸಬೇಕು ಎಂಬುದು ಈ ಭಾಗದ ಸಾರ್ವಜನಿಕರ ಮತ್ತು ಪ್ರಯಾಣಿಕರ ತುರ್ತು ಬೇಡಿಕೆಯಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!