ಮಂಗಳೂರು: ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹತ್ಯೆ, ಹಲ್ಲೆ ಹಾಗೂ ಹತ್ಯೆ ಯತ್ನ ಪ್ರಕರಣಗಳನ್ನು ಖಂಡಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕರೆಯ ಮೇರೆಗೆ ಮಂಗಳೂರಿನ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ನ್ಯಾಯಾಲಯ ಸಂಕೀರ್ಣದ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಕಳೆದ 15 ದಿನಗಳ ಹಿಂದೆ ಯುವ ವಕೀಲ ಮಂಜುನಾಥ್ ಅವರ ಮನೆಗೆ ನುಗ್ಗಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಶ್ರೀರಾಂ ಎಂಬ ವಕೀಲರ ಹತ್ಯೆ ನಡೆದಿದ್ದು, ವೆಂಕಟರಮಣ ಎಂಬ ವಕೀಲರ ಮೇಲೂ ಹತ್ಯೆ ಯತ್ನ ನಡೆದಿತ್ತು. ಸರಣಿ ಘಟನೆಗಳಿಂದ ವಕೀಲರ ವಲಯದಲ್ಲಿ ಆತಂಕ ಉಂಟಾಗಿದೆ.
ವಕೀಲರ ಸುರಕ್ಷತೆಯನ್ನು ಖಚಿತಪಡಿಸಬೇಕು ಹಾಗೂ ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ವಕೀಲರ ರಕ್ಷಣೆಗಾಗಿ ವಿಶೇಷ ಕಾನೂನು ಜಾರಿಗೊಳಿಸುವುದರ ಜೊತೆಗೆ ವಕೀಲರ ಮೇಲೆ ದಾಳಿ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ ಶಿವಮೂರ್ತಿ ಅವರ ಕರೆಯಂತೆ ಮಂಗಳೂರು ವಕೀಲರ ಸಂಘದ ಸದಸ್ಯರು ಸಂಪೂರ್ಣವಾಗಿ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ವಕೀಲರು ನಿರ್ಭೀತಿಯಿಂದ ವೃತ್ತಿ ನಿರ್ವಹಿಸಲು ಅಗತ್ಯ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಸರಕಾರದ ಗಮನ ಸೆಳೆದರು.

