ದೆಹಲಿಯಲ್ಲಿ CITU ಪಾರ್ಲಿಮೆಂಟ್ ಚಲೋ: ಹೊಸಂಗಡಿಯಲ್ಲಿ ಸಿದ್ಧತಾ ಸಭೆ

ಕಾರ್ಮಿಕ ವಿರೋಧಿ ಲೇಬರ್ ಕೋಡ್‌ಗಳನ್ನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಡಿಸೆಂಬರ್ 1 ಮತ್ತು 2ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿರುವ CITU ಪಾರ್ಲಿಮೆಂಟ್ ಚಲೋ ಕಾರ್ಯಕ್ರಮದ ಪ್ರಚಾರಕ್ಕೆ ಸಿದ್ಧತೆ ಆರಂಭವಾಗಿದೆ.

ಪಾರ್ಲಿಮೆಂಟ್ ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ನವೆಂಬರ್ 10ರಂದು ನಡೆಯಲಿರುವ ವಾಹನ ಪ್ರಚಾರ ಜಾಥಾದ ಸ್ವಾಗತ ಸಂಘ ರಚನಾ ಸಭೆ ಹೊಸಂಗಡಿಯ AKG ಮಂದಿರದಲ್ಲಿ ನಡೆಯಿತು.

CITU ಜಿಲ್ಲಾ ಕಾರ್ಯದರ್ಶಿ ಎ.ಆರ್. ಧನ್ಯವಾದ್ ಸಭೆಯನ್ನು ಉದ್ಘಾಟಿಸಿದರು. ಡಿ. ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ಜಾಥಾ ಲೀಡರ್ ಆಗಿ ಮಣಿಮೋಹನ್ ಹಾಗೂ ಜಾಥಾ ಮ್ಯಾನೇಜರ್ ಆಗಿ ವಿ.ಪಿ.ಪಿ. ಮುಸ್ತಫಾ ಕಾರ್ಯನಿರ್ವಹಿಸಲಿದ್ದಾರೆ.

ಲೇಬರ್ ಕೋಡ್ ಹಿಂಪಡೆಯುವುದು, 42 ಸಾವಿರ ರೂಪಾಯಿ ಕನಿಷ್ಠ ವೇತನ ನಿಗದಿಪಡಿಸುವುದು, ಸರ್ಕಾರಿ ಸಂಸ್ಥೆಗಳ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಟ್ರೇಡ್ ಯೂನಿಯನ್ ಹಕ್ಕುಗಳ ಸಂರಕ್ಷಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಪಾರ್ಲಿಮೆಂಟ್ ಚಲೋ ಹಮ್ಮಿಕೊಳ್ಳಲಾಗಿದೆ.

ಇದರೊಂದಿಗೆ ಎಸ್‌ಐಆರ್‌ನಿಂದ ಕಳೆದುಹೋದ ಮತದಾನದ ಹಕ್ಕುಗಳನ್ನು ಮರುಸ್ಥಾಪಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂಬ ಆಗ್ರಹವನ್ನೂ ಮುಂದಿಡಲಾಗಿದೆ.

ಸಭೆಯಲ್ಲಿ ಶಾಮ್ ಭಟ್ ಮಾಸ್ಟರ್, ವಿನಾಯಕ ಮಾಸ್ಟರ್ ಮೊದಲಾದವರು ಭಾಗವಹಿಸಿದರು. ಪ್ರಶಾಂತ್ ಕನಿಲ ಸ್ವಾಗತಿಸಿ, ಚಂದ್ರ ನಾಯ್ಕ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!