ದಕ್ಷಿಣ ಕನ್ನಡ ವಿಚಾರವಾದಿ ಸಂಘಕ್ಕೆ 50ರ ಸಂಭ್ರಮ ,ನ. 22ರಂದು ಸುವರ್ಣ ಮಹೋತ್ಸವ ಉದ್ಘಾಟನೆ, ವಿಚಾರಗೋಷ್ಠಿ

ಮಂಗಳೂರು: ದಕ್ಷಿಣ ಕನ್ನಡ ವಿಚಾರವಾದಿ ಸಂಘವು 50 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ನವೆಂಬರ್ 22ರಂದು ಮಂಗಳೂರಿನಲ್ಲಿ ಸುವರ್ಣ ಮಹೋತ್ಸವದ ಉದ್ಘಾಟನೆ ಹಾಗೂ ವಿವಿಧ ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಪ್ರೊ. ನರೇಂದ್ರ ನಾಯಕ್ ತಿಳಿಸಿದರು.

ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಗರದ ಬಿಜೈ-ಕಾಪಿಕಾಡ್ ರಸ್ತೆಯ ಕರ್ನಾಟಕ ಬ್ಯಾಂಕ್ ನೌಕರರ ಸಂಘದ ಸಭಾಂಗಣದಲ್ಲಿ ಸಂಘದ ಐದು ದಶಕಗಳ ವೈಚಾರಿಕ ಪಯಣ ಕುರಿತ ಗೋಷ್ಠಿಯೊಂದಿಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಬೆಳಗ್ಗೆ 11.30ಕ್ಕೆ ‘ನಮ್ಮೊಂದಿಗಿನ ಒಡನಾಟ ಹಾಗೂ ಹಿತೈಷಿಗಳ ಅನಿಸಿಕೆಗಳು’ ಎಂಬ ವಿಷಯದ ಕುರಿತು ಎರಡನೇ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 12.30ರಿಂದ ‘ಮುಂದಿನ ಭವಿಷ್ಯದ ಯೋಜನೆಗಳು’ ಎಂಬ ವಿಷಯದ ಕುರಿತು ಮೂರನೇ ಗೋಷ್ಠಿ ಆಯೋಜಿಸಲಾಗಿದೆ. ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿಯೂ ಮುಂದುವರಿಸಲಾಗುವುದು ಎಂದರು.

ಸುವರ್ಣ ಮಹೋತ್ಸವದ ಅಂಗವಾಗಿ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪವಾಡಗಳ ಹಿಂದಿನ ರಹಸ್ಯಗಳನ್ನು ಬಯಲಿಗೆಳೆಯುವ ಮೂಲಕ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಘ ನಿರಂತರವಾಗಿ ಮಾಡಿಕೊಂಡು ಬಂದಿದೆ. ಯುವಪೀಳಿಗೆಯನ್ನು ತಲುಪುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳ ಮೂಲಕವೂ ವೈಚಾರಿಕ ವಿಚಾರಗಳನ್ನು ಹಂಚಿಕೊಳ್ಳಲಾಗುತ್ತಿದೆ. ಶೀಘ್ರದಲ್ಲೇ ದಕ್ಷಿಣ ಕನ್ನಡ ಜಿಲ್ಲಾ ವಿಚಾರವಾದಿ ಸಂಘದ ಅಧಿಕೃತ ವೆಬ್‌ಸೈಟ್‌ ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಡಾ. ಕೆ.ಎಸ್. ಮಾಧವರಾವ್ ಮಾತನಾಡಿ, ಅಲೌಕಿಕ ಶಕ್ತಿಗಳ ಹೆಸರಿನಲ್ಲಿ ಹಳೆಯ ನಂಬಿಕೆಗಳನ್ನು ಬಂಡವಾಳವಾಗಿಸಿಕೊಂಡು ಜನಸಾಮಾನ್ಯರನ್ನು, ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದವರನ್ನು ವಂಚಿಸುವ ಜಾಲಗಳು ಇಂದಿಗೂ ಹೊಸ ರೂಪಗಳಲ್ಲಿ ಮುಂದುವರಿದಿವೆ. ವಿಜ್ಞಾನದ ಪ್ರಗತಿಯಿಂದ ಅಭಿವೃದ್ಧಿಗೊಂಡ ಅತ್ಯಾಧುನಿಕ ತಂತ್ರಜ್ಞಾನವನ್ನೇ ಅವೈಜ್ಞಾನಿಕ ವಿಚಾರಗಳನ್ನು ಹರಡಲು ಬಳಸಲಾಗುತ್ತಿದೆ. ಹೊಸ ಯುಗದ ಪವಾಡಗಳೆಂದು ಬಿಂಬಿಸುವ ವಿಡಿಯೋಗಳನ್ನು ಸೃಷ್ಟಿಸಲು ಹಾಗೂ ಹಳೆಯ ಮೂಢನಂಬಿಕೆಗಳನ್ನು ಸಮರ್ಥಿಸಲು ಕೃತಕ ಬುದ್ಧಿಮತ್ತೆಯನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಶಿಕ್ಷಣ ವ್ಯವಸ್ಥೆಯೂ ಮೂಢನಂಬಿಕೆಗಳನ್ನು ನಿವಾರಿಸುವ ಬದಲು ಅವುಗಳನ್ನು ಮತ್ತಷ್ಟು ಪೋಷಿಸುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ. ಯುವಪೀಳಿಗೆಯಲ್ಲಿ ವೈಚಾರಿಕ ಚಿಂತನೆ, ಪ್ರಶ್ನಿಸುವ ಮನೋಭಾವ ಹಾಗೂ ವೈಜ್ಞಾನಿಕ ದೃಷ್ಟಿಕೋನ ಬೆಳೆಸುವ ಅರಿವು ಮೂಡಿಸುವುದೇ ಇಂತಹ ಪ್ರವೃತ್ತಿಗಳನ್ನು ತಡೆಗಟ್ಟುವ ಪ್ರಮುಖ ಮಾರ್ಗವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಾಹ್ನವಿ, ಮನೋಜ್ ವಾಮಂಜೂರು, ಮಯೂರ್ ಹಾಗೂ ವಾಸುದೇವ್ ಉಚ್ಚಿಲ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!